top of page

ಹೋಮಿಯೋಪಥಿ ಮೇಲೆ ಯಾಕಿಷ್ಟು ಪಿತೂರಿ

ಒಂದು ಕನ್ನಡ ದಿನಪತ್ರಿಕೆ ಇಂಥ ಕಾಲ ಬರುತ್ತದೆಂದು ನಾನು ಊಹಿಸಿರಲಿಲ್ಲ. ಪ್ರಚಾರಕ್ಕೋ, ಪಿತೂರಿಗೋ, ಸುಳ್ಳು ಸುದ್ದಿಗಳಿಗೆ ಬಣ್ಣ ಹಚ್ಚಿ ಜನರನ್ನು ಮಂಕು ಮಾಡೋ ಹುನ್ನಾರವೋ, ಅಥವಾ ಕ್ಷೀಣಿಸಿತ್ತಿರೋ ಚಲಾವಣೆಯಿಂದ ಮುಳುಗುತ್ತಿರೋ ಅವರ ಪತ್ರಿಕಾ ವ್ಯಾಪಾರವನ್ನು ಉಳಿಸಲು ಮಾಡಿದ ಗಿಮಿಕ್ಕೋ ? ಒಟ್ಟಾರೆ ಈ ಒಂದು ಲೇಖನದ ಮೂಲಕ ‘ಪ್ರಜಾವಾಣಿ ಪತ್ರಿಕೆ’ ಪತ್ರಿಕೋದ್ಯಮದ ಆಚಾರ ನೀತಿಗಳಿಂದ ಇನ್ನೊಂದು ಹೆಜ್ಜೆ ದೂರ ಸರಿದು ವಾಟ್ಸಪ್ಪ್ ಯೂನಿವರ್ಸಿಟಿ ಯಂತಹ ಸುಳ್ಳುಸುದ್ದಿಗಳನ್ನ ಪ್ರಚಾರ ಮಾಡುವವರ ಸಾಲಿನಲ್ಲಿ ಸೇರಲು ತವಕಿಸುತ್ತಿದ್ದಂತೆ ಕಾಣುತ್ತಿದೆ.ದಿನಾಂಕ 26/3/2023 , ಭಾನುವಾರ, ‘ಪ್ರಜಾವಾಣಿ’ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಹೋಮಿಯೋಪಥಿ ಯ ವಿರುದ್ಧ ಯಾರೋ ಮಹಾನುಭಾವ , ನಾಗೇಶ ಎಡಗಡೆ ಅಂತೇ… ಅಲ್ಲಲ್ಲ ನಾಗೇಶ್ ಹೆಗಡೆ ಅಂತೆ, ಇವರು ಬರೆದಿರೋ ಲೇಖನ ಹೋಮಿಯೋಪಥಿ ಯನ್ನು ದೂಷಿಸುತ್ತಾ , ನಿಂದಿಸುತ್ತಾ , ಈ ವೈದ್ಯಪದ್ಧತಿಯನ್ನು ಅತ್ಯಂತ ಕೆಳಮಟ್ಟದಲ್ಲಿ ಚಿತ್ರಿಸುವಂತೆ ಬರೆಯಲಾಗಿದೆ.

ಸನ್ಮಾನ್ಯ ನಾಗೇಶ್ ಹೆಗಡೆ ಅವರ ಖ್ಯಾತಿ ಕುಖ್ಯಾತಿ ಕನ್ನಡಿಗರಿಗಾಗಲಿ, ಪತ್ರಿಕೆಗಳನ್ನು ಓದುವವರಿಗಾಗಲಿ ತಿಳಿಯದೇ ಇಲ್ಲವೆಂದಿಲ್ಲ. ವೃತ್ತಿಯ ಆರಂಭದಲ್ಲಿ ತಮ್ಮ ಕ್ರಿಯಾತ್ಮಕ ಕಾರ್ಯದಿಂದ, ವೈವಿಧ್ಯತೆಯಿಂದ ಕೂಡಿದ ವೈಜ್ಞಾನಿಕ ಲೇಖನಗಳನ್ನು ಬರೆದು ಕನ್ನಡಿಗರೂ ವಿಜ್ಞಾನವನ್ನು ಸುಲಭವಾಗಿ ತಿಳಿದುಕೊಳ್ಳುವಂತೆ ಬರೆದು ಜನರ ಮನದಲ್ಲಿ ತಮ್ಮದೇ ಹೆಸರು ರೂಪಿಸಿ ನಂತರದ ದಿನಗಳಲ್ಲಿ ಯಾವ ಗ್ರಹಚಾರಕ್ಕೋ ಏನೋ ಸಂಪ್ರದಾಯಿಕವಾದ ಎಲ್ಲವನ್ನೂ ದೂಷಿಸುತ್ತಾ, ತಮಗೆ ಇಷ್ಟವಲ್ಲದ್ದರ ಬಗ್ಗೆ ಕುಹುಕವಾಡುತ್ತ, ವಿಷಯಗಳ ವೈಜ್ಞಾನಿಕತೆಯನ್ನು ಅಧ್ಯನ ಮಾಡದೇ ತಮ್ಮ ಮೂಗಿನ ನೇರಕ್ಕೆ ಲೇಖನಗಳನ್ನು ಬರೆದು ತಮ್ಮದೇ ವಲಯದಲ್ಲಿ ಕುಖ್ಯಾತಿಗೆ ಒಳಗಾಗಿರೋದನ್ನು ನಾವೆಲ್ಲ ಕಂಡಿದ್ದೇವೆ.


ಇರಲಿ, ಆದರೆ ಈ ಲೇಖನ ಆ ಮಹಾನುಭಾವ ಪತ್ರಕರ್ತನ ಬಗ್ಗೆಯೂ ಅಲ್ಲ , ಅವನನ್ನು ಕರೆದು ಕೆಲಸ ಕೊಟ್ಟು ಲೇಖನ ಬರೆಸುತ್ತಿರೋ ಪತ್ರಿಕೆಯ ಬಗ್ಗೆಯೂ ಅಲ್ಲ. ಅವನು ಅಂತ ಏಕವಚನ ಬಳಸಿದರೆ ಉರಿಯುತ್ತೇನೋ , ಆದರೆ ಪ್ರಪಂಚಕ್ಕೆ ಹೋಮಿಯೋಪಥಿ ಎಂಬ ಅತ್ಯಂತ ಸುಲಭ, ಸಹಜ ಮತ್ತು ವೈಜ್ಞಾನಿಕ ವೈದ್ಯಪದ್ಧತಿಯನ್ನು ಕೊಡುಗೆಯಾಗಿ ನೀಡಿದ ಡಾ.ಸ್ಯಾಮ್ಯುಯೆಲ್ ಹನ್ನೆಮನ್ನ್ ಅವರನ್ನು ಏಕವಚನದಲ್ಲಿ ಸಂಭೋದಿಸುವ, ಅವರ ಸಾಧನೆಗಳನ್ನು ಕುಚೋದ್ಯ ಮಾಡಿರುವ ವ್ಯಕ್ತಿಯ ಮೇಲೆ ಇನ್ನೆಂಥ ಗೌರವ ಭಾವನೆ ಬರಲೂ ಸಾಧ್ಯವಿಲ್ಲ . ಈ ಲೇಖನ ಹೋಮಿಯೋಪಥಿಯ ವಿಜ್ಞಾನಿಕತೆ ಮತ್ತದರ ಉದಾಹರಣೆಗಳ ಸಂಕೇತವಾಗಿ ಬರೆದಿರುತ್ತೇನೆ .


ಮೊದಲನೆಯದಾಗಿ ಹೋಮಿಯೋಪಥಿ ಯಲ್ಲಿ ಕೇವಲ ವಿಷಪೂರಿತ ವಸ್ತುಗಳನನ್ನು ಬಳಸಿಯೇ ಔಷದಿಗಳನ್ನ ತಯಾರು ಮಾಡಲಾಗಿಲ್ಲ. ಸಸ್ಯ, ಪ್ರಾಣಿ, ಖನಿಜ ಮೊದಲಾದ ವಸ್ತುಗಳಿಂದಲೂ ಹೋಮಿಯೋಪಥಿ ಔಷದಗಳನ್ನು ತಯಾರು ಮಾಡಲಾಗುತ್ತದೆ. ಈ ವಸ್ತುಗಳನ್ನು potentisation ಅನ್ನೋ ವಿಶಿಷ್ಟ ಪ್ರಕ್ರಿಯೆಯ ಮೂಲಕ ಔಷಧಗಳಾಗಿ ಮಾರ್ಪಡಿಸಲಾಗುತ್ತದೆಯೇ ಹೊರತು ದುರ್ಬಲಗೊಳಿಸಲಾಗುವುದಿಲ್ಲ (diluted). ಈ ಔಷಧಗಳಲ್ಲಿ ಮೂಲ ವಸ್ತುವಿನ ಕಚ್ಚಾ ಗುಣಗಳು ಇರುವುದಿಲ್ಲ. ಆದರೆ potentisation ನಿಂದ ಈ ಕಚ್ಚಾ ವಸ್ತುಗಳು ನ್ಯಾನೋ ಕಣಗಳಿಗಿಂತಲೂ ಸಂಕುಚಿತವಾದ ಪ್ರಮಾಣದಲ್ಲಿ ಔಷಧಗಳಾಗಿ ತಯಾರಾಗುತ್ತವೆ. ಈ ವಸ್ತುಗಳನ್ನು ಮಾಪನ ಮಾಡಲು , ಅಳೆಯಲು , ಮೌಲ್ಯಮಾಪನ ಮಾಡುವಷ್ಟು ನಮ್ಮ ತಂತ್ರಜ್ಞಾನ ಇನ್ನು ಮುಂದುವರೆದಿಲ್ಲ. 2012 ರಲ್ಲಿ ಐರಿಸ್ ಬೆಲ್ ಮತ್ತು ಮೇರಿ ಕೊಇಥಾನ್ ಅವರು ಬರೆದಿರುವ ವೈಜ್ಞಾನಿಕ ಲೇಖನ ಪ್ರಪಂಚದ ಹಲವು ವೈಜ್ಞಾನಿಕ ವೈದ್ಯಕೀಯ ಜರ್ನಲ್ ಗಳಲ್ಲಿ ಪ್ರಕಟಗೊಂಡಿದೆ. ಈ ಲೇಖನದಲ್ಲಿ ನಡೆಸಿರೋ ಸಂಶೋಧನೆಯ ಪ್ರಕಾರ ಹೋಮಿಯೋಪಥಿ ಔಷಧಗಳಲ್ಲಿ ನ್ಯಾನೋಕಣಗಳ ಇರುವಿಕೆಯ ಬಗ್ಗೆ ಸ್ಪಷ್ಟ ಉದಾಹರಣೆ ಇದೆ. ಈ ವಿಜ್ಞಾನಿಕ ವಿಷಯಗಳ ಅಧ್ಯಯನ ಮಾಡೋದರ ಬದಲು ಯಾರೋ ಹೇಳಿದರೆಂದು ಹೋಮಿಯೋಪಥಿ ಯನ್ನು ‘ಸುಳ್ಳು ಔಷದ’ (placebo effect ) ಅನ್ನುವವರದು ವಿತಂಡವಾದವೇ ಸರಿ. ಬಹುಷಃ ಅರ್ಧ ಮಿದುಳನ್ನು ಗಾಳಿಗೆ ತೂರಿದ ಎಡಗಡೆ ಲೇಖಕರಿಗೆ ಈ ಲೇಖನಗಳು ಕಣ್ಣಿಗೆ ಬಿದ್ದಿಲ್ಲವೇನೋ.


ಹೋಮಿಯೋಪಥಿ ‘ವಿಷಕ್ಕೆ ವಿಷವೇ ಮದ್ದು’ ಅನ್ನೋ ತತ್ವದ ಮೇಲೆ ಕೆಲಸ ಮಾಡುತ್ತದೆ ಅನ್ನೋದನ್ನು ಯಾವ ವಿಜ್ಞಾನಿ ಇವರ ಕಿವಿಯಲ್ಲಿ ಒದರಿದ್ದನೋ . ಹೋಮಿಯೋಪಥಿ ‘similia similibus curentur’ ಅನ್ನುವ ತತ್ವದ ಮೇಲೆ ಕೆಲಸ ಮಾಡುತ್ತದೆ. ಅಂದರೆ, ಒಬ್ಬ ಆರೋಗ್ಯಕರ ವ್ಯಕ್ತಿಗೆ ಒಂದು ಹೋಮಿಯೋಪಥಿ ಔಷದವನ್ನು ಕೊಟ್ಟರೆ ಅವನು ಯಾವ ರೋಗಲಕ್ಷಣಗಳನ್ನು ತೋರಿಸುತ್ತಾನೋ , ಅದೇ ರೋಗಲಕ್ಷಣಗಳನ್ನು ಉಳ್ಳ ರೋಗಿಗೆ ಆ ಔಷದವನ್ನು ಕೊಟ್ಟರೆ ಆ ರೋಗ ವಾಸಿ ಆಗುತ್ತದೆ ಎಂದು. ಉದಾಹರಣೆಗೆ phosphorus ಅನ್ನೋ ಔಷದಿಯನ್ನ ಒಬ್ಬ ಆರೋಗ್ಯಕರ ವ್ಯಕ್ತಿಗೆ ಕೊಟ್ಟರೆ ಅವನಿಗೆ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು , ಆ ಕೆಮ್ಮು ಬಲಗಡೆ ಮಲಗಿದರೆ ಮಾತ್ರ ಕಡಿಮೆಯಾಗುತ್ತದೆ. ಹಾಗೆಯೇ, ಯಾವುದಾದರೂ ಕೆಮ್ಮಿರುವ ರೋಗಿ , ಆ ಕೆಮ್ಮು ಬಲಗಡೆ ಮಲಗಿದರೆ ಮಾತ್ರ ಕಡಿಮೆಯಾಗುತ್ತದೆ ಅಂದರೆ ಅವನನ್ನು phosphorus ನಿಂದ ವಾಸಿ ಮಾಡಬಹುದು. ಇದೊಂದು ಸ್ಥೂಲ ಉದಾಹರಣೆಯಾಗಿದ್ದು ನಾವು ಇನ್ನು ಹಲವು ಸೂಕ್ಷ್ಮ ಲಕ್ಷಣಗಳನ್ನು ರೋಗಿಯಿಂದ ಪಡೆದುಕೊಳ್ಳಬೇಕಾಗುತ್ತದೆ. ರೋಗಿಯಿಂದ ಪಡೆದುಕೊಂಡ ಹಲವು ರೋಗಲಕ್ಷಣಗಳು ಆ ಔಷಧಕ್ಕೆ ಹೊಂದಿದಾಗ ಮಾತ್ರ ಆ ಔಷಧಿಯನ್ನು ಕೊಡಬಹುದು. ಪ್ರತಿಯೊಬ್ಬ ಕೆಮ್ಮಿರುವ ವ್ಯಕ್ತಿಗೆ ‘ನಾಗೇಶ್ ಹೆಗಡೆ’ ಯವರು ಹೇಳಿರೋ ಹಾಗೆ ಜಿರಳೆಯಿಂದ ಮಾಡಿರೋ ‘ಬ್ಲಟ್ಟ ಓರಿಯೆಂಟಲಿಸ್’ ಔಷದಿ ಕೊಟ್ಟರೆ ಯಾವ ಬದಲಾವಣೆಯೂ ಆಗೋದಿಲ್ಲ. ಕೇವಲ ಕೆಮ್ಮಿಗೆ ಹೋಮಿಯೋಪಥಿ ಯಲ್ಲಿ 300 ಔಷಧಿಗಳಿವೆ. ಅದರಲ್ಲಿ ರೋಗಿಯ ಗುಣಲಕ್ಷಣವನ್ನು ಹೋಲುವ ಒಂದು ಸರಿಯಾದ ಔಷದಿ ಕೊಟ್ಟರೆ ಅಷ್ಟೇ ವಾಸಿ ಸಾಧ್ಯ.


ಅಂದಹಾಗೆ ಹೋಮಿಯೋಪಥಿ ಪದ್ಧತಿಯಲ್ಲಿ ರೋಗಲಕ್ಷಣಗಳು ಮುಖ್ಯವಲ್ಲ, ಆ ರೋಗಲಕ್ಷಣಗಳಿಗೆ ನೇರವಾಗಿ ಚಿಕಿತ್ಸೆ ನೀಡಿ ಅವುಗಳನ್ನು suppress ಮಾಡೋದನ್ನು ಈ ಪದ್ಧತಿ ಒಪ್ಪುವುದಿಲ್ಲ. ಮನುಷ್ಯನ ಜೀವಚೈತನ್ಯವನ್ನು ಆಧಾರವನ್ನಾಗಿಸಿ ನೋಡುವ ಪದ್ಧತಿ ಇದಾಗಿದೆ. ಮನುಷ್ಯನ ಜೀವಚೈತನ್ಯ ರೋಗಕ್ಕೆ ಒಳಗಾದಾಗ, ಪ್ರತಿಯೊಬ್ಬ ಮನುಷ್ಯ ತನ್ನದೇ ಆದಂತಹ ವೈಯಕ್ತಿಕ ವಿಶಿಷ್ಟ ರೋಗಲಕ್ಷಣಗಳನ್ನು ತೋರುತ್ತಾನೆ. ಆ ರೋಗಲಕ್ಷಣಗಳ ಅಧ್ಯಯನದಿಂದ ಮನುಷ್ಯನ ಜೀವಚೈತನ್ಯ ಹೇಗೆ ಗೊಂದಲಗೊಂಡು ರೋಗಗ್ರಸ್ತವಾಗಿದೆ ಅನ್ನೋದನ್ನು ಅರಿತುಕೊಂಡು , ಅದೇ ವೈಯಕ್ತಿಕತೆ ಹೊಂದಿರುವ ಔಷಧಿಯನ್ನು ನೀಡಿದಾಗ ಅದು ಮನುಷ್ಯನ ಜೀವಚೈತನ್ಯವನ್ನು ಉತ್ತಮಗೊಳಿಸಿ, ಅದರ ಮೂಲಕ ಅವನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಆ ಮನುಷ್ಯನಿಗೆ ಕಾಯಿಲೆಯನ್ನು ವಾಸಿಮಾಡುವ ಚೈತನ್ಯವನ್ನು ತುಂಬುತ್ತದೆ. ಪದ್ಧತಿ ತುಂಬಾ ಕ್ಲಿಷ್ಟಕರವಾದದ್ದು ಹೆಗಡೆಯವರೇ. ಮೇಲಿನ ಸಾಲುಗಳನ್ನ ಇನ್ನೊಂದೆರಡು ಸಾರಿ ಓದಿ.


ಈ ತರಹ ಹೋಮಿಯೋಪಥಿ ಪದ್ಧತಿಯಲ್ಲಿ ಔಷದಗಳನ್ನು ಹೇಗೆ ತಯಾರು ಮಾಡೋದು, ಅವುಗಳನ್ನು ಹೇಗೆ ಕೊಡೋದು , ರೋಗಿಯ ಬಳಿ ಲಕ್ಷಣಗಳನ್ನು ಪಡೆದುಕೊಂಡು ಅವುಗಳ ಅಧ್ಯಯನ ಹೇಗೆ ಮಾಡೋದು ಇವೆಲ್ಲ ಸೂಚನೆಗಳನ್ನು ಒಳಗೊಂಡ 291 ಸೂಕ್ತಿಗಳನ್ನು ಡಾ.ಹನ್ನೆಮನ್ನ್ ರವರು ಬರೆದಿದ್ದರೆ. ಕೇವಲ ಬಾಯಿಮಾತಿನಿಂದಲೋ, ವಾಟ್ಸಪ್ಪ್ ಮೆಸೇಜ್ ಗಳಿಂದಲೋ ಹೋಮಿಯೋಪಥಿ ಯನ್ನು ದೂಷಿಸೋ ಮೊದಲು ಯಾರಾದರೂ ಆಗಲಿ ಈ ಸೂಕ್ತಿಗಳನ್ನು ಓದಲಿ.

ಪ್ರಪಂಚದ ಹಲವಾರು ಕಡೆ ಬುದ್ಧಿವಂತರು ಅನ್ನಿಸಿಕೊಂಡವರು ಹೋಮಿಯೋಪಥಿ , ಸುಳ್ಳು ಔಷದ ಅನ್ನೋದನ್ನ ಡಂಗೂರ ಬಾರಿಸಿಕೊಂಡು ನಾಟಕ ಮಾಡೋದು, ಹೇಳಿಕೆಗಳನ್ನು ನೀಡೋದೇ ಮಾಡುತ್ತಿದ್ದಾರೆ.ತರ್ಕಬದ್ಧವಾದ ವಿಷಯ ಚರ್ಚೆಗಳಲ್ಲಿ ಭಾಗವಹಿಸದಿರುವುದು ಅವರ ಬುದ್ಧಿಮತ್ತೆಯ ಪೊಳ್ಳುತನವನ್ನು ಮತ್ತವರ ಪುಕ್ಕಲತನವನ್ನು ತೋರಿಸುತ್ತದೆ. ವೈಜ್ಞಾನಿಕ ಪದ್ಧತಿ ಅನ್ನಿಸಿಕೊಂಡಿರೋ ಅಲೋಪತಿ ಗುಣಪಡಿಸಲಾಗದಿರೋ ಕಾಯಿಲೆಗಳನ್ನು ಹೋಮಿಯೋಪತಿ ವಾಸಿಮಾಡುತ್ತಿದೆ ಅನ್ನೋದು ಈ ಬುದ್ಧಿವಂತರಿಗೆ ನುಂಗಲಾರದ ತುತ್ತಾಗಿದೆ. ತೊನ್ನು, ಗ್ಯಾಂಗ್ರೀನ್ ನಂತಹ ಕಾಯಿಲೆಗಳು ಕೇವಲ ಹೋಮಿಯೋಪಥಿ ಔಷಧಗಳಿಂದ ಗುಣವಾಗಿರೋದನ್ನು ಸಹ ‘ಸುಳ್ಳು ಔಷದ’ placebo effect ಅನ್ನೋರು ತಮ್ಮ ಮಿದುಳನ್ನು ಹೊರಗೆ ತಗೆದು ನೋಡಿ ಅವಲೋಕಿಸಿ ತಮ್ಮ ಅಸ್ತಿತ್ವವನ್ನು ಪ್ರಶ್ನಿಸಿಕೊಳ್ಳೋ ಪ್ರಯತ್ನ ಮಾಡಬೇಕು .


2014 ರಲ್ಲಿ ಭಾರತದ ಅತ್ಯುನ್ನತ ‘ವೈಜ್ಞಾನಿಕ ವೈದ್ಯಿಕೀಯ’ ಸಂಸ್ಥೆ ಎಂದು ಮನ್ನಣೆಗೆ ಪಾತ್ರವಾಗಿರೋ ‘AIIMS’ ಆಸ್ಪತ್ರೆಯ ಮತ್ತು DRDO ಅಂಗಸಂಸ್ಥೆಯಾದ ‘Institute of Nuclear Medicine and Allied Sciences (IN- MAS)’ ಸಹಭಾಗಿತ್ವದಲ್ಲಿ ಆಟೋಇಮ್ಮ್ಯೂನ್ ಥೈರಾಯಿಡ್ (Autoimmune thyroidism) ಕಾಯಿಲೆಯ ಬಗ್ಗೆ ಅಧ್ಯಯನ ನಡೆಸಲಾಯಿತು. RCT- Single Blind ಮಾದರಿಯಲ್ಲಿ ಈ ಅಧ್ಯಯನ ನಡೆಸಲಾಯಿತು. ಅದರಲ್ಲಿ 194 ಥೈರಾಯಿಡ್ ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ 194 ರೋಗಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಒಂದು ಭಾಗದ ರೋಗಿಗಳಿಗೆ ಕೇವಲ ‘ಸುಳ್ಳು ಔಷದಿ’ (Placebo) ನೀಡಲಾಗಿತ್ತು , ಇನ್ನೊಂದು ಭಾಗಕ್ಕೆ ಹೋಮಿಯೋಪತಿ ಔಷಧಿಯನ್ನು ನೀಡಲಾಗಿತ್ತು. ಹನ್ನೆರಡರಿಂದ- ಹದಿನೆಂಟು ತಿಂಗಳುಗಳ ಚಿಕಿತ್ಸೆಯನ್ನೊಳಗೊಂಡ ಅಧ್ಯನದಲ್ಲಿ ‘ಸುಳ್ಳು ಔಷದಿ’ ತಗೆದುಕೊಂಡ 10% ಜನರಲ್ಲಿ ಕಾಯಿಲೆ ಉಲ್ಬಣಗೊಂಡಿತ್ತು, ಆದರೆ ಯಾರಲ್ಲಿಯೂ ಕಾಯಿಲೆ ವಾಸಿ ಆಗಿದ್ದಿಲ್ಲ. ಆದರೆ ಹೋಮಿಯೋಪಥಿ ಔಷಧಿಯನ್ನು ತಗೆದುಕೊಂಡ ಶೇಕಡಾ 70.2% ಜನರಿಗೆ ಕಾಯಿಲೆ ವಾಸಿಯಾಗಿತ್ತು . ಇದಕ್ಕಿಂತ ಹೆಚ್ಚಿನ ಪುರಾವೆಗಳನ್ನು, ದಾಖಲೆಗಳನ್ನು ಒದಗಿಸಬೇಕೇ ಹೆಗಡೆಯವರೇ ?


2015 ಯ ‘Indian Journal of Research in Homeopathy’ ಪತ್ರಿಕೆಯಲ್ಲಿ ಗ್ಯಾಂಗ್ರೀನ್ ಸಮಸ್ಯೆಗೆ ಹೋಮಿಯೋಪತಿ ಔಷಧಗಳಿಂದ ಕೊಳೆತುಹೋಗುತ್ತಿದ್ದ ಕಾಲುಗಳನ್ನು ಪುನರ್ಜೀವಗೊಳಿಸಿ , ಕಾಲುಗಳಲ್ಲಿ ಮತ್ತೆ ರಕ್ತಸಂಚಾರವಾಗುವಂತೆ ಚಿಕಿತ್ಸೆ ನೀಡಿರುವ ‘case study’ ಇವೆ. 2017 ರ ‘American Journal of Case Reports’ ವೈದ್ಯಕೀಯ ವಿಜ್ಞಾನದ ಪತ್ರಿಕೆಯಲ್ಲಿ ಬೇರೆ ಯಾವ ಪದ್ಧತಿಯಿಂದಲೂ ಗುಣಪಡಿಸಲಾಗದ ‘ತೊನ್ನು’(vitiligo) ಕಾಯಿಲೆಯನ್ನು ಹೋಮಿಯೋಪತಿ ಸಂಪೂರ್ಣವಾಗಿ ವಾಸಿಮಾಡಿರೋದರ ಬಗ್ಗೆ ಸುಧೀರ್ಘ ವಿವರಗಳನ್ನೊಳಗೊಂಡ peer reviewed ಲೇಖನ ಮೂಡಿಬಂದಿದೆ. ಅಲೋಪತಿ ಪದ್ಧತಿಯನ್ನು ಬಿಟ್ಟು ಬೇರೆ ವಿಧಾನಗಳನ್ನು ಹೊಸಿಲಿನೊಳಕ್ಕೂ ಸೇರಿಸದ ದೊಡ್ಡ ದೊಡ್ಡ ಜರ್ನಲ್ ಗಳೂ ಸಹಾ ಹೋಮಿಯೋಪಥಿ ಯ ಸತ್ಯಾಸತ್ಯತೆಯನ್ನು ನಿರಾಕರಿಸಲಾಗದೆ ತಮ್ಮ ಜರ್ನಲ್ ಗಳಲ್ಲಿ ಈ ಲೇಖನಗಳನ್ನು ಪ್ರಕಟಿಸುತ್ತಿವೆ.


2015 ರಲ್ಲಿ ಆಸ್ಟ್ರೇಲಿಯಾ ದ ಸಂಶೋಧಕರು 1800 ಸಂಶೋಧನೆಗಳಲ್ಲಿ 225 ಮಾತ್ರ ಗಟ್ಟಿಕಾಳುಗಳು ಅಂತ ಹೇಳಿದಾಗ ಅದರಲ್ಲಿ ಹುರುಳಿದೆಯೋ ಇಲ್ಲವೋ ಅನ್ನೋ ನಿರ್ಧಾರವನ್ನು ಹೇಗೆ ಮಾಡಿದರು ಅನ್ನೋದರ ಬಗ್ಗೆ ನಾಗೇಶ ಹೆಗಡೆಯವರು ಓದಿದ್ದಾರೋ? ಇಲ್ಲ ಹಾಗೆಯೇ ಏನು ಬರೆದರೂ ಜನ ಓದುತ್ತಾರೆ ಅನ್ನೋ ಅಸಡ್ಡೆಯಿಂದ ಮಾತಾಡಿದ್ದರೋ. ಹೋಮಿಯೋಪಥಿ ಪೊಳ್ಳೆಂದು ಲೆಕ್ಕವಿಲ್ಲದಷ್ಟು ಪ್ರಭಂದಗಳು ಬರೆಯಲ್ಪಟ್ಟಿವೆ ಅನ್ನೋರು ಆ ಪ್ರಬಂಧಗಳ ‘ಹುರುಳನ್ನು’ ಅಧ್ಯಯನ ಮಾಡೋ ಪ್ರಯತ್ನ ಮಾಡಿದ್ದರೋ? ಇಲ್ಲ ತಮ್ಮ ಜ್ಞಾನದಲ್ಲೇ ಸಿಗದಾಗಿರುವ ಹುರುಳನ್ನು ಹುಡುಕೋ ವ್ಯರ್ಥಪ್ರಯತ್ನವನ್ನು ಮಾಡುತ್ತ ಇದ್ದರೋ ? ಅದೇ NHMRC ಸಂಸ್ಥೆಯ ಸಿ.ಇ.ಓ ಆನ್ ಕೆಲ್ಸೋ 2019 ರಲ್ಲಿ ಇದೇ ಲೇಖನದ ಕುರಿತಾಗಿ ಬರೆದು ‘ನಾವು ಹೋಮಿಯೋಪಥಿ ಔಷದಗಳು ಕೆಲಸ ಮಾಡಲ್ಲ , ಅವುಗಳಲ್ಲಿ ಹುರುಳಿಲ್ಲ ಅಂತ ನೇರವಾಗಿ ನಿರ್ಧರಿಸಿಲ್ಲ , ಆದರೆ ಅದರ ಕುರಿತಾದ ಸಮರ್ಪಕವಾದ ಪುರಾವೆಗಳು ದೊರೆತಿಲ್ಲ ಅಂತ ಹೇಳಿದ್ದೇವೆ ಅಷ್ಟೇ’ ಅನ್ನೋ ಸಮಜಾಯಿಷಿಯನ್ನು ನೀಡಿ ಕ್ಷಮೆ ಕೇಳಿರೋದರ ಬಗ್ಗೆ ನಿಮ್ಮ ‘ವೈಜ್ಞಾನಿಕ ಮಿದುಳಿಗೆ’ ಮಾಹಿತಿ ಇಲ್ಲವೋ ? ಇಲ್ಲ, ಅದು ಗೊತ್ತಿದ್ದರೂ ನಿಮ್ಮ ಅರ್ಧಸತ್ಯವನ್ನು ಮರೆಮಾಚುವ ಚಾಳಿಯನ್ನು ಇಲ್ಲಿಯೂ ಮುಂದುವರೆಸಿರುವಿರೋ ? ವಿಜ್ಞಾನಕ್ಕೆ ಆದರ ಉನ್ನತಿಗೆ ಪೂರ್ಣ ಸತ್ಯಗಳೇ ಆಧಾರ ಅನ್ನೋದು ನಿಮ್ಮ ಸ್ಮ್ರಿತಿಪಟಲದಿಂದ ಹಾರಿಹೋಗಿದೆಯೇ ?


ಸುಳ್ಳುಗಳಿಂದ , ಸುಳ್ಳು ಹೇಳುವುದರಿಂದ ನಿಮ್ಮ ಹಾಗೆ ಬೆರಳೆಣಿಕೆಯಷ್ಟು ಹಿಂಬಾಲಕರನ್ನು ಪಡೆಯಬಹುದೇ ಹೊರತು ಕೋಟ್ಯಂತರ ಜನರು ಹೋಮಿಯೋಪಥಿ ಔಷದಗಳನ್ನು ಸುಳ್ಳುಗಳ ಆಧಾರದ ಮೇಲೆ ತಗೆದುಕೊಳ್ಳಲು ಸಾಧ್ಯವಿಲ್ಲ. ಹೋಮಿಯೋಪಥಿ ಯ ನಿಷೇಧದ ಬಗ್ಗೆ ಅತ್ಯಂತ ಉತ್ಸುಕರಾಗಿರೋ ನಿಮ್ಮ ಕನಸು ಇನ್ನು ಸಾವಿರ ಜನುಮಗಳೆತ್ತಿದರೂ ನನಸಾಗುವ ಮಾತಿಲ್ಲ ಬಿಡಿ. ನಂಬಿಕೆ ಮನುಷ್ಯನನ್ನು ಒಂದು ನಿಲ್ದಾಣದವರೆಗೂ ಕರೆದುಕೊಂಡು ಹೋಗಬಹುದೇ ಹೊರತು ವೈಜ್ಞಾನಿಕತೆ ಇಲ್ಲದಿದ್ದಲ್ಲಿ ದಡ ಸೇರಲು ಸಾಧ್ಯವಿಲ್ಲ. ನಂಬಿಕೆಯ ಆಧಾರದ ಮೇಲೆ ರೋಗಿ ಹೋಮಿಯೋಪಥಿ ವೈದ್ಯನ ಕ್ಲಿನಿಕ್ ಬಾಗಿಲವರೆಗೆ ಬರುತ್ತಾನೆ ಹೊರತು ವೈಜ್ಞಾನಿಕತೆ ಇರದೇ ಕೇವಲ ನಂಬಿಕೆ ಮಾತ್ರದಿಂದ ಥೈರಾಯಿಡ್, ಗ್ಯಾಂಗ್ರೀನ್, autoimmune ಕಾಯಿಲೆಗಳು ವಾಸಿಯಾಗಲ್ಲ ಅನ್ನೋದು ನಿಮ್ಮ ತರ್ಕಕ್ಕೆ ಯಾಕೆ ಹೊಳೆಯಲಿಲ್ಲ?


ನೀವು ಹೇಳಿರೋಹಾಗೆ ‘ಮದರ್ ಟಿಂಚರ್’ (mother tinctures) ನೇರವಾಗಿ ಹೋಮಿಯೋಪಥಿ ಔಷಧಗಳಲ್ಲ . Mother tinctures ಅಂದರೆ ಹೋಮಿಯೋಪಥಿ ಔಷದಗಳನ್ನು ತಯಾರಿಸಲು ಬಳಸುವ ಕಚ್ಚಾ ತಯಾರಿಕೆಗಳು. Mother Tinctures ಗಳನ್ನ ಸಂಸ್ಕರಿಸಿ potentisation ವಿಧಾನದಿಂದ ಹೋಮಿಯೋಪಥಿ ಔಷದಗಳನ್ನು ತಯಾರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಈ mother tinctures ಗಳ ಸೇವನೆಯಿಂದಲೇ ಕಾಯಿಲೆಗಳು ವಾಸಿಯಾಗಿರೋದು ಕಂಡುಬಂದಿರುವುದರಿಂದ ಕೆಲವು ವೈದ್ಯರು ಇದರ ಸಲಹೆ ನೀಡುತ್ತಾರೆ. ಈ ದ್ರವಗಳ ಐದರಿಂದ ಹತ್ತು ಹನಿಗಳನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಲು ಹೇಳುತ್ತಾರೆ . ಹೀಗೆ ಬೆರೆಸುವುದರಿಂದ ಅದರಲ್ಲಿನ ಆಲ್ಕೋಹಾಲ್ ಪ್ರಮಾಣ ಹಲವು ಪಟ್ಟು ಕ್ಷೀಣಿಸಿರುತ್ತದೆ. ಆದರೆ ಸಾಮಾನ್ಯವಾದ ಹೋಮಿಯೋಪಥಿ ಚಿಕಿತ್ಸೆಯಲ್ಲಿ ಈ mother tincture ಗಳನ್ನೂ ಹೆಚ್ಚಾಗಿ ಬಳಸೋದೆ ಇಲ್ಲ. ಆದಾಗ್ಯೂ ಯಾವುದೋ ಊರಿನಲ್ಲೊಬ್ಬ , ‘ಒಬ್ಬ’ ವೈದ್ಯ ಮಾಡಿರುವ ಎಡವಟ್ಟನ್ನು ನೀವು ಇಡೀ ವ್ಯವಸ್ಥೆಯ ತಲೆಗೆ ಕಟ್ಟುತ್ತಿದೀರಲ್ಲ ? ಕೋವಿಡ್ ಸಮಯದಲ್ಲಿ ಒಂದು ದಿನಕ್ಕೆ ಐದು ‘ಪ್ಯಾರಸಿಟಮಾಲ್’ ಮಾತ್ರೆಗಳನ್ನು ಬರೆದ, ಉಪಯೋಗವಿಲ್ಲದ ‘hydroxychloroquinine’ ಮಾತ್ರೆಗಳನ್ನು ಎಗ್ಗಿಲ್ಲದೆ ಬರೆದು ಜನರಿಗೆ ನೀಡಿದ, ಒಂದು ಕೆಮ್ಮಿಗೆ ಎಂದು ಹೋದರೆ ಹತ್ತಾರು ಮಾತ್ರೆ, ಡ್ರಾಪ್ಸ್, ಔಷಧಿಗಳನ್ನು ಬರೆದು ಅವಶ್ಯಕತೆ ಇಲ್ಲದಿದ್ದರೂ ಆಪರೇಷನ್ ಮಾಡಿ ಜನರ ಬಳಿ ಹಣ ಕೀಳುತ್ತಿರೋ ‘ಕೆಲವು’ ಅಲೋಪತಿ ಡಾಕ್ಟರ್ಗಳ ಮತ್ತು ಅವ್ರ ಅವೈಜ್ಞಾನಿಕ ವಿಧಾನಗಳ ಕಡೆ ನಿಮ್ಮ ಚಿತ್ತ ಹರಿಯೋದಿಲ್ಲವೋ ?

ಒಂದಿಬ್ಬರು ಮಾಡಿರೋ ಎಡವಟ್ಟುಗಳನ್ನು, ಅಪರಾಧಗಳಿಗೆ , ಎಡವಟ್ಟು ಮಾಡಿರೋ ವೈದ್ಯರನ್ನು ಟೀಕಿಸದೇ ಇಡೀ ಪದ್ಧತಿಯನ್ನು ಟೀಕಿಸುವಾಗ ತಮ್ಮ ವೃತ್ತಿಪರತೆ ಮತ್ತು ಮೌಲ್ಯಗಳನ್ನು ನಿಮ್ಮ ಮನೆಯ ಮೇಲಿನ ಅಟ್ಟದ ಮೇಲೆ ಕಟ್ಟಿ ಹಾಕಿದ್ರ ?

ಒಂದು ಕೆಜಿ ಹುರುಳಿಕಾಳು ತಗೆದುಕೊಂಡು ಮನೆಗೆ ಬಂದರೆ , ಅರ್ಧ ಗಂಟೆ ಶೋಧಿಸಿದ ಮೇಲೆ ಕೆಲವು ಪುಟ್ಟ ಕಲ್ಲುಗಳ ಸಿಗೋಹಾಗೆ ಒಂದು ವೈದ್ಯಪದ್ಧತಿಯಲ್ಲಿರೋ ಕೆಲವು ಕಲ್ಲುಗಳನ್ನು ಶೋಧಿಸಿ ಹೊರತೆಗೆಯೋ ಬದಲು, ಇಡೀ ಹುರುಳಿಕಾಳಿನ ಕಟ್ಟನ್ನೇ ಹೊರಗೆಸೆದಂತಾಯ್ತು ನಿಮ್ಮ ತರ್ಕ.


ಕೊಚ್ಚಿಯಲ್ಲಿರೋ ರಾಜಗಿರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಯಕೃತ್ತಿನ ಸಮಸ್ಯೆಗೆ ಚಿಕಿತ್ಸೆ ತಗೆದುಕೊಂಡು ಒಂಬತ್ತು ರೋಗಿಗಳು ಮೃತಪಟ್ಟಿದ್ದಾರೆ ಅನ್ನೋದನ್ನು ಬರೆದಿದ್ದೀರಲ್ಲವಾ , ಅವರು ಕೇವಲ ಹೋಮಿಯೋಪತಿ ಮದ್ದುಗಳನ್ನು ಸೇವಿಸಿಯೇ ಸತ್ತಿದ್ದಾರೆ ಅನ್ನೋದಕ್ಕೆ ಎಲ್ಲಾದರೂ ಪುರಾವೆ ಇದೆ ಅನ್ನೋದನ್ನು ಕಂಡಿದ್ದೀರಾ? ಹಾಗೆ ಮುಂದೆ ಬರೆಯುತ್ತ ಆ ಔಷಧಗಳಲ್ಲಿ anti biotic ಗಳು, ಸ್ಟೀರಾಯ್ಡ್ ಗಳು , ಔದ್ಯಮಿಕ ದ್ರವ್ಯಗಳು, ಅಮಲು ಬರಿಸುವ ದ್ರವ್ಯಗಳು , ಕೆಮಿಕಲ್ ಅಫಿಮುಗಳು , ಅಪಾಯಕಾರಿ ಲೋಹಗಳು ಇದ್ದವೆಂದು ತಿಳಿಯಿತು ಅಂತ ಹೇಳಿದ್ದಿರಾ. ಈ ಮೇಲಿನ ಪಧಾರ್ಥಗಳೆಲ್ಲ ಹೋಮಿಯೋಪಥಿ ಔಷದಗಳೇ ? ಅಲ್ಲವಲ್ಲ ? ಒಂದೇ ಪರಿಚ್ಛೇದ ದಲ್ಲಿ ಹೀಗೆ ವ್ಯತಿರಿಕ್ತ ಹೇಳಿಕೆಗಳನ್ನು ಕೊಟ್ಟಿದ್ದೀರಾ. ಈ ತರಹದ ಕೆಟ್ಟ ಚಿಕಿತ್ಸೆ ಕೊಟ್ಟಿರೋ ಆಸ್ಪತ್ರೆಯ ವಿರುದ್ಧ ಏನಾದರು ಹೇಳಿ ಅದನ್ನು ಬಿಟ್ಟು ಹೋಮಿಯೋಪಥಿ ಮೇಲೆ ನಿರುಪಯುಕ್ತ ಕೆಂಡ ಕಾರಬೇಡಿ.


ಹಿಂದೆಂದೂ ಲಿವರ್ ಸಮಸ್ಯೆ ಇರದವರು ಕೋವಿಡ್ ಪರಿಹಾರಕ್ಕಾಗಿ ‘ಅರ್ಸೆನಿಕಮ್ ಆಲ್ಬಮ್’ ಸೇವನೆ ಮಾಡಿ ಲಿವರ್ ಸಮಸ್ಯೆಗೆ ಒಳಗಾದರು ಅಂತ ಹೇಳಿದ್ದೀರಲ್ಲ, ಆ ಸಮಯದಲ್ಲಿ ಜನ ತಗೆದುಕೊಂಡಿದ್ದು ‘ಅರ್ಸೆನಿಕಮ್ ಆಲ್ಬಮ್ 30 c’ ಅನ್ನೋ ಔಷಧಿಯನ್ನು. ಅದರಿಂದ ಯಕೃತ್ತು ಹಾಳಾಗೋಕೆ ಸಾಧ್ಯವೇ ಇಲ್ಲ. ‘ಅರ್ಸೆನಿಕಮ್ ಆಲ್ಬಮ್ 30 c’ ಔಷಧದಲ್ಲಿ ‘ಆರ್ಸೆನಿಕ್’ ನ ಒಂದು ನ ಕಣವನ್ನಾದರೂ ತೋರಿಸಿ ನೋಡೋಣ. ನಿಮಗೆ ಗೊತ್ತಿರೋ ಪ್ರಪಂಚದ ಯಾವ ‘ವೈಜ್ಞಾನಿಕ’ ಲ್ಯಾಬ್ ಗಳಲ್ಲಿ ಎಂಥ ಉಪಕರಣವನ್ನು ಬಳಸಿ ನೋಡಿದರೂ ಸಿಗೋದಿಲ್ಲ ಹೆಗಡೆಯವರೇ.


ತರ್ಕಬದ್ಧ ಆಲೋಚನೆಗಳ ಮೂಲಕ ಹೆಸರು ಮಾಡಿದ್ದ ನೀವು ಈ ಸ್ಥಿತಿಗೆ ಬರಲು ಕಾರಣವೇನೆಂದೇ ತಿಳಿಯುತ್ತಿಲ್ಲವಲ್ಲ.


ಬರ್ಖಾ ದತ್ತ್ ನಂಥವರನ್ನು ಇಂತಹ ವೈಜ್ಞಾನಿಕ ಲೇಖನಗಲ್ಲಿ ಸೇರಿಸಿ, ಡಾ. ಆರಿಫ್ ಹುಸೈನ್ ನಂತಹ ತಳಬುಡವಿಲ್ಲದೆ ವಾದ ಮಾಡುವವರ ಮಾತನ್ನು ಕೇಳಿ ಅದೇ ನಿಜವೆಂದು ನಿರ್ಧರಿಸುವ ನಿಮ್ಮ ಈ ಅಸಡ್ಡೆಯೇ ವಿಪರ್ಯಾಸವೆನ್ನಿಸುತ್ತದೆ. Homeopathic Pharmacopeia of India (HPI) ಅನ್ನೋ ಸರ್ಕಾರದಿಂದ ಅಂಗೀಕೃತಗೊಂಡಿರೋ ಪುಸ್ತಕದಲ್ಲಿ ಪ್ರತಿಯೊಂದು ಹೋಮಿಯೋಪಥಿ ಔಷಧಿಯನ್ನು ಕಚ್ಚಾ ವಸ್ತುಗಳಿಂದ ಹೇಗೆ ತಯಾರು ಮಾಡುವುದು, ಅವುಗಳನ್ನು ಅಪಾಯಕಾರಿಯಾಗದೆ ಹೇಗೆ ಸಂಸ್ಕರಿಸಬೇಕು, ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದಕ್ಕೆ ಸರಿಯಾದ, ನಿಶ್ಚಿತ ನಿಯಮಗಳಿವೆ. ಆ ನಿಯಮಗಳನ್ನು ಮೀರಿ ಕಾನೂನು ಬಾಹಿರವಾಗಿ ತಯಾರು ಮಾಡೋರನ್ನು ಕಾನೂನಾತ್ಮಕವಾಗಿ ಮಣಿಸಬೇಕೇ ಹೊರತು ಪದ್ಧತಿಯ ವಿರುದ್ಧ ಮಾತಾಡಿ ಸ್ವಂತ ತೆವಲನ್ನು ತೀರಿಸಿಕೊಳ್ಳೋದು ಉದ್ದೇಶವಾಗಿರಬಾರದು.


ವಿಜ್ಞಾನವೆಂಬುದು ದೇವರ ಹಾಗಲ್ಲ, ತನ್ನನ್ನು ತಾನೇ ಪರೀಕ್ಷೆಗೆ ಒಳಪಡಿಸಿಕೊಂಡು ಮುಂದುವರೆಯಬೇಕು ಅನ್ನೋ ನಿಮ್ಮ ಅಂಬೋಣಕ್ಕೆ ಸರಿಯಾಗಿಯೇ ಬರಿಯುತ್ತಿದ್ದೇನೆ. ಪ್ರತೀ ತಿಂಗಳಿಗೊಮ್ಮೆ ಹಲವು ಅಲೋಪತಿ ಔಷಧಿಗಳು ದೇಶ ವಿದೇಶಗಳಲ್ಲಿ ಅಪಾಯಕಾರಿಯೆಂದು ತಿರಸ್ಕೃತವಾಗುತ್ತವೆ. ಅಂತಹ ಔಷಧಿಗಳು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟವಾಗಿ ಹಲವು ಜನರ ಪ್ರಾಣಕ್ಕೆ ಹಾನಿಯಾಗುತ್ತದೆ. ಇನ್ನು ಕೆಲವು ದೇಶಗಳಲ್ಲಿ ಅಪಾಯಕಾರಿಯೆಂದು ಗೊತ್ತಿದ್ದರೂ ವೈದ್ಯರು ಅದೇ ಔಷಧಿಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಅಂಥದರಲ್ಲಿ ಸುಮಾರು 250 ವರ್ಷಗಳ ಇತಿಹಾಸ ಹೊಂದಿದ್ದರೂ, ಇವತ್ತಿನ ವರೆಗೂ ಹೋಮಿಯೋಪಥಿ ಯ ಒಂದು ನಿಯಮವೂ ತಿರಸ್ಕೃತಗೊಂಡಿಲ್ಲ. ಅದೇ ನಿಯಮಗಳನ್ನು ಇಂದಿಗೂ ಸರಿಯಾಗಿ ಪಾಲಿಸಿ ಔಷಧಿಯನ್ನು ನೀಡಿದಾಗ ವ್ಯಕ್ತಿ ಗುಣವಾಗುತ್ತಾನೆ. ಇಂತಹ ಪದ್ಧತಿಗೆ ನೀವು ವಿಜ್ಞಾನದ ಪಾಠ ಹೇಳೋದೇನು ಬೇಡ. ಹೋಮಿಯೋಪಥಿ ಮೇಲೆ ದೊಡ್ಡ ದೊಡ್ಡ ಔಷದ ಕಂಪನಿಗಳು ಮಸಲತ್ತು ಮಾಡೋದು ಬಿಡಿ , ನಿಮ್ಮಂತಹ ಅರ್ಧ ಬುದ್ಧಿಯ ಸಾಧಾರಣ ‘ಲದ್ದಿಜೀವಿಗಳೇ’ ಪದ್ಧತಿಯ ವಿರುದ್ಧ ಅಪಪ್ರಚಾರ ಮಾಡುತ್ತ ಇರೋದು.


ಚಿಕ್ಕ ವಯಸ್ಸಿನಿಂದ ತೊನ್ನು ಹೊಂದಿ ಸಮಾಜದಿಂದ ದೂಷಣೆಗೆ ಒಳಗಾದ ಮಹಿಳೆ , ಇಡೀ ಸಂಸಾರಕ್ಕೆ ತಾನೊಬ್ಬನೇ ದುಡಿದು ತರಬೇಕಾದ ವ್ಯಕ್ತಿ ಮಧುಮೇಹದಿಂದ ಗ್ಯಾಂಗ್ರೀನ್ (ಕಾಲು ಕೊಳೆತುಕೊಳ್ಳುವ ಕಾಯಿಲೆ)ಗೆ ಒಳಗಾದಾಗ, ಚಿಕ್ಕ ಮಕ್ಕಳು ಅಸ್ತಮಾ ದಂತಹ ಕಾಯಿಲೆಯಿಂದ ನರಳಿ ಅಲೋಪತಿಯ ಸ್ಟೀರಾಯ್ಡ್ ಗಳಿಗೆ ಅವಲಂಬಿತರಾದಾಗ , ಇಂತಹ ಹಲವು ಸಂದರ್ಭದಲ್ಲಿ ಹೋಮಿಯೋಪಥಿ ಇವರ ಕಾಯಿಲೆಯನ್ನು ಗುಣಪಡಿಸುತ್ತಾ ಇಂಥವರ ಬಾಳಿನಲ್ಲಿ ದಾರಿದೀಪವಾಗಿದೆ. ಇಂಥವರನ್ನು , ಅವಶ್ಯಕತೆ ಇರುವ ಜನರ ದಾರಿ ತಪ್ಪಿಸಿ , ಅವರನ್ನು ಚಿಕಿತ್ಸೆಯ ಅವಕಾಶದಿಂದ ವಂಚಿತರನ್ನಾಗಿಸುವ ಪಾಪ ಕಟ್ಟಿಕೊಳ್ಳಬೇಡಿ.


ವೈದ್ಯಪದ್ಧತಿಗಳಲ್ಲೇ ಅತ್ಯಂತ ಕ್ಲಿಷ್ಟಕರವಾದ ಪದ್ಧತಿಯಾದ ಹೋಮಿಯೋಪಥಿ ಯನ್ನು , ವರ್ಷಗಳಿಂದ ಅಧ್ಯಯನ ಮಾಡುತ್ತ, ಅಭ್ಯಸಿಸುತ್ತಾ, ಅನೇಕ ಅಡಚಣೆಗಳ, ಅವಮಾನಗಳ, ದೂಷಣೆಗಳ ಮಧ್ಯೆಯೂ ಒಂದೇ ಧ್ಯೇಯವನ್ನು ಅನುಸರಿಸಿ ಇಂತಹ ಉತ್ಕೃಷ್ಟವಾದ, ಅತ್ಯಂತ ವೈಜ್ಞಾನಿಕವಾದ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರೋ ಲಕ್ಷಾಂತರ ನಿಜವಾದ ಹೋಮಿಯೋಪಥಿ ವೈದ್ಯರ ಬಲ, ಸಂಕಲ್ಪ ವನ್ನು ಅಲುಗಾಡಿಸಲು ನಿಮ್ಮಂತಹ ಹಾಗೆಯೇ ಟ್ವಿಟ್ಟರ್ ವೀರ ನಾದ ‘ಅಬ್ಬಿ ಫಿಲಿಪ್ಸ್’ ನಂತಹ ಸಂಕುಚಿತ ಮನೋಭಾವದವರಿಗೆ ಎಂದಿಗೂ ಸಾಧ್ಯವಿಲ್ಲ.


ಹೋಮಿಯೋಪಥಿ ವೈದ್ಯಪದ್ಧತಿಯನ್ನು ಭಾರತೀಯ ಘನ ಸಂವಿಧಾನ ವೈಜ್ಞಾನಿಕ ಪದ್ಧತಿಯೆಂದು ಗುರುತಿಸಿ ಅದರ ಅಭ್ಯಾಸಕ್ಕೆ, ಸಂಶೋಧನೆಗೆ ಮನ್ನಣೆಯನ್ನು ಸಾಂವಿಧಾನಿಕವಾಗಿ ನೀಡಿದೆ. ಇಂಥ ಸಂವಿಧಾನದಿಂದ ಅಂಗೀಕೃತಗೊಂಡಿರೋ ವೈದ್ಯಪದ್ಧತಿಯ ಬಗ್ಗೆ ಕುಚೋದ್ಯ ಮಾಡಿ, ತಳಬುಡಗಳಿಲ್ಲದ ಆಧಾರಗಳಿಂದ ನಿಮ್ಮ ಸ್ವಾರ್ಥಕ್ಕೆ ವ್ಯಂಗ್ಯ ಮಾಡುವುದು ಸಂವಿಧಾನಕ್ಕೆ ನೀವು ನೀಡುವ ಗೌರವವನ್ನು ತೋರಿಸುತ್ತದೆ.


ಬರೀ ಕರ್ನಾಟಕ ರಾಜ್ಯದಲ್ಲೇ ಸರ್ಕಾರೀ ಹಾಗೂ ಖಾಸಗಿ ಕಾಲೇಜುಗಳಿಂದ ಪ್ರತೀ ವರ್ಷ ಸುಮಾರು ಸಾವಿರ ವಿದ್ಯಾರ್ಥಿಗಳು ಹೋಮಿಯೋಪಥಿ ವೈದ್ಯರಾಗಿ ಹೊರಹೊಮ್ಮುತ್ತಿದ್ದಾರೆ. ನಿಮ್ಮ ಕುಹುಕದ ನುಡಿಗಳು ಐದೂವರೆ ವರ್ಷ ಕಷ್ಟಪಟ್ಟು ಓದಿರುವ ಎಲ್ಲ ಹೋಮಿಯೋಪಥಿ ವೈದ್ಯರನ್ನು ಲೇವಡಿ ಮಾಡುವಂತಿದೆ.


ಎರಡು ಪುಟಗಳಷ್ಟು ಬರೆದರೂ ಕೇವಲ ಅಂಬೋಣ , ಅಂತೆಕಂತೆಗಳ ಬಗ್ಗೆ ಮಾತಾಡಿದ್ದೀರೆ ಹೊರತೂ ಒಂದು ವೈಜ್ಞಾನಿಕ, ತರ್ಕಬದ್ಧ ಪುರಾವೆಗಳನ್ನು ಒದಗಿಸೋದರಲ್ಲಿ ವಿಫಲರಾಗಿದ್ದೀರಿ. ನಿಮ್ಮ ನಕಾರಾತ್ಮಕ, ಅವೈಜ್ಞಾನಿಕ, ಅಸಡ್ಡೆಯಿಂದ ಕೂಡಿದ ಲೇಖನಗಳನ್ನು , ವಾಕರಿಕೆ ಬರುವಂತಹ ಕುಚೋದ್ಯ, ವ್ಯಂಗ್ಯಗಳನ್ನು ಓದಲಾಗದೆ ನಿಮ್ಮನ್ನು ಜನರಾಗಲೇ ತಿರಸ್ಕರಿಸಿ ಆಗಿದೆ. ಸತ್ಯದ ಅರಿವಿಲ್ಲದೆ ನಿಮ್ಮಂಥವರನ್ನು ಕರೆದು ಬರೆಸಿ ಪ್ರಕಟಿಸೋ ‘ಪ್ರಜಾವಾಣಿ’ಯನ್ನು ಸಹ ಜನ ಕೊಳ್ಳುವುದನ್ನು ಬಿಟ್ಟಿದ್ದಾರೆ. ನಿಮ್ಮ ಆಧಾರ ರಹಿತ ಲೇಖನಗಳಿಂದ ಆಗಲೇ ನಿಮ್ಮ ಬರಹ ವೃತ್ತಿ ಸಹ ನೇಪಥ್ಯಕ್ಕೆ ಸರಿದಿದೆ. ಇನ್ನಾದರೂ ಎಚ್ಚೆತ್ತುಕೊಂಡ ಪದ್ಧತಿಗಳ ಸತ್ಯಾಸತ್ಯತೆಗಳನ್ನು ಅರಿತುಕೊಂಡು ಬರೆಯದಿದ್ದರೆ ನೀವು ನಿಮ್ಮ ಬೌದ್ಧಿಕ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು . ನಮಸ್ಕಾರ .


ವಿ.ಸೂ : ಈ ಲೇಖನವನ್ನು ಓದಿದಮೇಲೂ ನಿಮಗೆ ಸಮಾಧಾನವಾಗದಿದ್ದಲ್ಲಿ , ಇನ್ನು ಹೆಚ್ಚು ಪುರಾವೆಗಳು ಬೇಕಾದಲ್ಲಿ ಈ ಕೆಳಗಿನ ಲಿಂಕ್ ಗಳನ್ನೂ ಒತ್ತಿ ಓದಬಹುದು. ಇದು ನಿಮ್ಮ ಮಾಮೂಲಿ ಪತ್ರಿಕೆಗಳಲ್ಲಿ ಮನಸ್ಸಿಗೆ ಬಂದಂತೆ ಗೀಚಿದ ಅಕ್ಷರಗಳಲ್ಲ. ಹೆಸರಾಂತ ‘ವೈದಕೀಯ ವೈಜ್ಞಾನಿಕ’ ಜರ್ನಲ್ ಗಳಲ್ಲಿ ಪ್ರಕಟವಾದ ಲೇಖನಗಳಾಗಿವೆ.


7 views0 comments

Comments


bottom of page