top of page

ಹೋಮಿಯೋಪತಿ ನಿಧಾನವೆಂಬ ಮಿಥ್ಯದ ಸುತ್ತ

ಕಳೆದ ತಿಂಗಳು ಒಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹೋಮಿಯೋಪತಿಯನ್ನು ತೆಗಳುವ ಲೇಖನದ ವಿರುದ್ಧ ನಾನು ಬರೆದ ಲೇಖನಕ್ಕೆ ರಾಜ್ಯಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು. ಆಧಾರರಹಿತ ಲೇಖನವನ್ನು ಬರೆದ ಲೇಖಕ ಹಾಗು ಅದನ್ನು ಪ್ರಕಟಿಸಿದ ಪತ್ರಿಕೆಯ ವಿರುದ್ಧವೂ ಹಲವಾರು ಜನ ದನಿಯೆತ್ತಿದ್ದರು. ಕರ್ನಾಟಕದಲ್ಲಿ ಹೋಮಿಯೋಪತಿಯ ಬಗ್ಗೆ ಜನರಿಗಿರುವ ನಂಬಿಕೆ ಮತ್ತು ವೈದ್ಯರಿಗಿರುವ ಅಭಿಮಾನ ನಿಜಕ್ಕೂ ಪ್ರಶಂಸನೀಯ.


ಜನತೆಯಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆ, ಹೋಮಿಯೋಪತಿ ವೈದ್ಯರಿಗೆ ಹಾಗು ಈ ವೈಜ್ಞಾನಿಕ ವೈದ್ಯಪದ್ಧತಿಯ ಕುರಿತು ಅಧ್ಯಯನ ಮಾಡಿ ಬರೆಯುವ ಲೇಖಕರ ಉತ್ಸಾಹಕ್ಕೂ ಪುಷ್ಟಿ ನೀಡಿದೆ.


ನಮ್ಮ ರಾಜ್ಯದಲ್ಲಿ ಸುಮಾರು ನಾಲ್ಕೈದು ದಶಕಗಳಿಂದಲೂ ಹೋಮಿಯೋಪತಿ ವೈದ್ಯರು ಮತ್ತು ಕಾಲೇಜು ಗಳು ಇದ್ದರೂ ಈ ಪದ್ಧತಿಯ ಪ್ರಚಲಿತತೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ. ಅದಕ್ಕೆ ಹಲವಾರು ಕಾರಣಗಳಿವೆ. ಹೋಮಿಯೋಪತಿ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಮತ್ತದರ ಬಗೆಗಿನ ಅನುಮಾನಗಳು ಹಾಗು ಮಿಥ್ಯಾಭಿಪ್ರಾಯಗಳನ್ನು ಜನರ ಮನಸ್ಸಿಂದ ನಿವಾರಿಸಲು ಇನ್ನುಮುಂದೆ ಪ್ರತೀ ತಿಂಗಳಿಗೊಮ್ಮೆಯಾದರು ಒಂದು ಲೇಖನವನ್ನು ಬರಿಯುವ ನಿರ್ಧಾರ ಮಾಡಿದ್ದೇನೆ .


ನಮ್ಮ ರಾಜ್ಯದಲ್ಲಿ ಸಾಮಾನ್ಯ ಜನರ ನಡುವೆ ಹೋಮಿಯೋಪತಿಯ ಪರಿಚಯ ಇರದಿರುವುದರ ಹಿಂದಿನ ಹಲವು ಕಾರಣಗಳಲ್ಲಿ ಒಂದಾದದ್ದು ‘ಹೋಮಿಯೋಪತಿ ನಿಧಾನ , ತುಂಬಾ ನಿಧಾನವಾಗಿ ಕೆಲಸ ಮಾಡುತ್ತದೆ, ವಾಸಿಯಾಗಲು ವರ್ಷಗಳೇ ಬೇಕು’ ಅನ್ನುವ ಅಭಿಪ್ರಾಯ. ಜನರಲ್ಲಿ ಈ ಅಭಿಪ್ರಾಯ ಎಷ್ಟು ಮನೆಮಾತಾಗಿದೆ ಎಂದರೆ ಹೋಮಿಯೋಪತಿ ಬಗ್ಗೆ ತಿಳಿಯದವರೂ , ಒಮ್ಮೆಯೂ ಹೋಮಿಯೋಪತಿ ಚಿಕಿತ್ಸೆಯ ಅನುಭವ ಪಡೆಯದವರೂ ಸಹ ಈ ಮಾತನ್ನು ಆಡುವುದನ್ನು ನಾನು ಗಮನಿಸಿದ್ದೇನೆ.

ಇಂಥ ಅಭಿಪ್ರಾಯಗಳನ್ನ ಕೇಳಿದ ಹಲವರು ಒಮ್ಮೆಯೂ ಹೋಮಿಯೋಪತಿ ಔಷಧಿಗಳನ್ನು ತಗೆದುಕೊಳ್ಳದೆ , ನಿಧಾನವೇ ಇರಬಹುದೇನೋ ಅನ್ನೋ ಮನಸ್ಥಿತಿ ಗೆ ಕಟ್ಟುಬಿದ್ದು ಹೋಮಿಯೋಪತಿಯಿಂದ ದೂರ ಸರಿದಿದ್ದಾರೆ.ಈ ಲೇಖನದಲ್ಲಿ, ಹೋಮಿಯೋಪತಿ ಬಗ್ಗೆ ಈ ಅಭಿಪ್ರಾಯ ಇರುವುದರ ಕಾರಣ, ಅದರ ಸತ್ಯಾಸತ್ಯತೆ ಹಾಗು ಹೋಮಿಯೋಪತಿ ಮಾತ್ರೆಗಳು ಕೆಲಸ ಮಾಡುವ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.


ಹೋಮಿಯೋಪತಿ ಮಾತ್ರೆಗಳು ನೇರವಾಗಿ ಮನುಷ್ಯನ ಅಂಗಾಂಗಳ ಮೇಲೆ ಗುರಿ ಇಡೋದಿಲ್ಲ. ಅಲೋಪಥಿ ಔಷದಗಳ ಹಾಗೆ ನೋವಿದ್ದರೆ ನೋವಿಗೆ , ಉರಿಯಿದ್ದರೆ ಅದಕ್ಕೆ, ಅಥವಾ ಯಾವ ವಿಟಮಿನ್ ಅಭಾವವಿದ್ದರೆ ಅದಕ್ಕೆ ಸರಿಯಾಗಿ ಮಾತ್ರ ಮಾತ್ರೆಗಳಿರುವಂತೆ ಹೋಮಿಯೋಪತಿ ಪದ್ಧತಿ ಕೆಲಸ ಮಾಡಲ್ಲ. ಹೋಮಿಯೋಪತಿ ಪದ್ಧತಿ ನಿಯಮಗಳಿಗನುಸಾರ ಹೋಮಿಯೋಪತಿ ಮಾತ್ರೆಗಳು ಮನುಷ್ಯನ ಜೀವಚೈತನ್ಯದ ಮೇಲೆ ಕೆಲಸ ಮಾಡುತ್ತವೆ. ಯಾವ ಚೈತನ್ಯ ಮನುಷ್ಯನ ಹುಟ್ಟಿನಿಂದ ಅವನ ಕೊನೆಯವರೆಗೂ ಜೊತೆಗಿರುತ್ತದೆಯೋ , ಯಾವ ಚೈತನ್ಯದಿಂದ ಮನುಷ್ಯ ಉಸಿರಾಡುತ್ತಾನೋ , ಯಾವ ಚೈತನ್ಯದಿಂದ ಮಾನವನ ಹೃದಯ ಬಡಿಯುತ್ತದೆಯೋ , ಅವನ ಚಯಾಪಚನ ಕ್ರಿಯೆಗಳಾಗುತ್ತವೋ, ಯಾವ ಚೈತನ್ಯದಿಂದ ಮಾನವನ ಆಲೋಚನಶಕ್ತಿ, ಭಾವನಶಕ್ತಿ ಸಹಜವಾಗಿ ಇರುತ್ತದೆಯೋ ಅದೇ ಚೈತನ್ಯದ ಮೇಲೆ ಕೆಲಸ ಮಾಡುತ್ತದೆ. ತಂತ್ರಜ್ಞಾನ ಇಷ್ಟು ಮುಂದುವರೆದಿದ್ದರೂ ಆ ಚೈತನ್ಯವನ್ನು ಮಾಪನ ಮಾಡುವ ಉಪಕರಣವನ್ನು ಇನ್ನು ಕಂಡುಹಿಡಿಯಲಾಗಿಲ್ಲ.


ಜೀವಚೈತನ್ಯ (Vital Force) ಮಾನವನ ದೇಹದಲ್ಲಾಗುವ ಎಲ್ಲ ಕ್ರಿಯೆಗಳು , ಮನಸ್ಸಿನಲ್ಲಾಗುವ ಎಲ್ಲ ಯೋಚನೆಗಳು, ಭಾವನೆಗಳನ್ನು ನಿಯಂತ್ರಿಸುತ್ತದೆ . ಈ ಜೀವಚೈತನ್ಯ ಮಾನವನ ಎಲ್ಲ ಸಹಜಕ್ರಿಯೆಗಳನ್ನು ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳುತ್ತದೆ. ವಂಶಪಾರಂಪರ್ಯವಾಗಿ, ತನ್ನ ಪೂರ್ವಜರು ಹೊಂದಿದ್ದ ಕಾಯಿಲೆಗೆ ಅನುಗುಣವಾಗಿ, ತನ್ನ ಪ್ರಕೃತಿಯಲ್ಲಾಗುವ ಬದಲಾವಣೆಗಳಿಂದಾಗಲಿ , ತನ್ನ ಆಲೋಚನೆಗಳಿಂದಾಗಲಿ ಒಬ್ಬ ಮನುಷ್ಯನ ಜೀವಚೈತನ್ಯ ನಕಾರಾತ್ಮಕ ಪ್ರಭಾವಕ್ಕೆ ಒಳಪಡುತ್ತದೆ. ಈ ನಕಾರಾತ್ಮಕ ಪ್ರಭಾವಗಳ ಒತ್ತಡಕ್ಕೆ ಒಳಪಟ್ಟ ಜೀವಚೈತನ್ಯವನ್ನು ಕಾಯಿಲೆಗಳು ಆಕ್ರಮಿಸುತ್ತವೆ. ಮಾನವನ ರೋಗಪ್ರವೃತ್ತಿಗೆ (Predisposition) ಗೆ ಅನುಗುಣವಾಗಿ ಒಬ್ಬರಿಗೆ ಒಂದೊಂದು ಕಾಯಿಲೆ ಬರುತ್ತದೆ. ಕಾಯಿಲೆಗಳು ಬೇರೆ ಬೇರೆಯಾದರೂ ಅವುಗಳ ಬೇರು ಒಂದೇ ಆಗಿರುತ್ತದೆ.

ಹೋಮಿಯೋಪತಿ ವೈದ್ಯರು ರೋಗಿಯ ರೋಗಲಕ್ಷಣಗಳನ್ನು ವಿಶ್ಲೇಷಿಸಿ ಆ ರೋಗಿಯ ಸ್ಥಿತಿಗೆ ಅನುಗುಣವಾಗಿ ನೀಡುವ ಮಾತ್ರೆಗಳು ಅದೇ ಜೀವಚೈತನ್ಯವನ್ನು (Vital force) ಬಲಪಡಿಸಿ, ಕುಗ್ಗಿದ ಚೈತನ್ಯಕ್ಕೆ ಮರುಶಕ್ತಿ ನೀಡುತ್ತದೆ. ಈ ಮಾತ್ರೆಗಳ ಸಹಾಯದಿಂದ ಜೀವಚೈತನ್ಯ ಕಾಯಿಲೆಯನ್ನು ಒಳಗಿನಿಂದಲೇ, ಬೇರು ಸಮೇತ ಕಿತ್ತೊಗೆಯುತ್ತದೆ. ಅಂದರೆ, ಹೋಮಿಯೋಪತಿ ಮಾತ್ರೆಗಳು ಕಾಯಿಲೆಗಳನ್ನ ದೇಹವೇ ಹೊಡೆದೋಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ಇದನ್ನ Self-Healing ಅಂತ ಸಹ ಕರೆಯುತ್ತಾರೆ. ಇಡೀ ಪ್ರೆಪಂಚದಲ್ಲಿ ಈ self-healing ನಿಟ್ಟಿನಲ್ಲಿ ಕಾರ್ಯವಹಿಸುವ ವೈದ್ಯಪದ್ಧತಿ ಎಂದರೆ ಅದು ಹೋಮಿಯೋಪತಿ ಒಂದೇ.

ಈಗ ಹೋಮಿಯೋಪತಿ ಯ ಪದ್ಧತಿಗಳ, ಮತ್ತದರ ಮಾತ್ರೆಗಳ ಕಾರ್ಯಪ್ರಕ್ರಿಯೆಯೆ ಬಗ್ಗೆ ತಿಳಿದುಕೊಂಡಂತಾಯಿತು. ಈಗ ಮಾನವನ ದೇಹದಲ್ಲಿ ರೋಗದ ದಾರಿ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ . ಮೇಲೆ ಓದಿರುವ ಹಾಗೆ. ಮಾನವನ ಜೀವಚೈತನ್ಯ ಕುಗ್ಗಿದಾಗ ಬರುವ ಕಾಯಿಲೆಗಳು ಒಮ್ಮೆಲೇ ತಮ್ಮ ರೋಗಲಕ್ಷಣಗಳನ್ನ ಹೊರಹಾಕುವುದಿಲ್ಲ. ಇದರಲ್ಲಿ ಎರಡು ವಿಧಗಳಿವೆ.


ಒಂದು , ವ್ಯಕ್ತಿ ಯಾವುದಾದರೂ ತೀಕ್ಷ್ಣ ಪ್ರಭಾವಕ್ಕೆ ಒಳಗಾದಾಗ ಬರೋ ಖಾಯಿಲೆಗಳು. ಅಂದರೆ ಒಣ ಹವಾಮಾನದಲ್ಲಿರೋ ವ್ಯಕ್ತಿ , ಜೋರಾಗಿ ಮಳೆ ಬೀಳುವ ಪ್ರದೇಶಕ್ಕೆ ಹೋಗಿ ಮಳೆಯಲ್ಲಿ ನೆನೆದುಕೊಂಡಾಗ ಬರುವ ಜ್ವರ, ಕೆಮ್ಮು. ಸದಾ ಮನೆಯೂಟ ಮಾಡುವ ವ್ಯಕ್ತಿ ಹೊರಗಡೆ ಸ್ವಚ್ಛತೆ ಇಲ್ಲದ, ಕಲುಷಿತ ವಾತಾವರಣಗಳಲ್ಲಿ , ಕಡಿಮೆ ಗುಣಮಟ್ಟದ ಆಹಾರ ಸೇವಿಸಿದಾಗ ಬರುವ ಟೈಫಾಯಿಡ್ (Typhoid), ಆಮಶಂಕೆ (Dysentry) ಸಮಸ್ಯೆಗಳು, ಯಾವುದೋ ಭಯಾನಕ ದೃಶ್ಯ ನೋಡಿ ಭಯಗೊಂಡ ಮಗು , ಅಪಘಾತದಲ್ಲಿ ಆಘಾತಗೊಂಡ ವ್ಯಕ್ತಿ, ಹತ್ತಿರದವರನ್ನು ಅಕಾಲಿಕ ವಾಗಿ ಕಳೆದುಕೊಂಡಾಗ ವ್ಯಕ್ತಿಗೆ ಆಗುವ ಆಘಾತ, ದುಃಖ . ಇವುಗಳನ್ನು ತಕ್ಷಣ ಆಗುವ ಕಾಯಿಲೆಗಳು (Acute Diseases) ಎಂದು ಪರಿಗಣಿಸಲಾಗುತ್ತದೆ. ಆಕಸ್ಮಿಕವಾಗಿ, ಹಠಾತ್ತಾಗಿ ಜರುಗುವ ಘಟನೆಗಳು ಜೀವಚೈತನ್ಯದ ಮೇಲೆ ತೀಕ್ಷ್ಣವಾದ ಪ್ರಭಾವ ಬೀರುವ ಕಾರಣ ಮನುಷ್ಯನ ದೇಹ ಮತ್ತು ಮನಸ್ಸುಗಳು ಒತ್ತಡಕ್ಕೆ ಒಳಪಟ್ಟು ಬಹಳ ಸ್ಥೂಲವಾದ, ಖಚಿತವಾದ , ಸ್ಪಷ್ಟವಾದ ರೋಗಲಕ್ಷಣಗಳನ್ನು ತೋರುತ್ತವೆ. ಮನುಷ್ಯನು ಸಾಮಾನ್ಯವಾಗಿ ಅನುಭವಿಸುವ ಜ್ವರ, ಕೆಮ್ಮು, ನೆಗಡಿ, ವಾಂತಿ, ಬೇಧಿ ಇವೆಲ್ಲ ಇದೆ Acute Diseases ಪ್ರವರ್ಗಕ್ಕೆ ಸೇರುತ್ತವೆ. ಇಂತಹ ಸನ್ನಿವೇಶಗಳಲ್ಲಿ ತಜ್ಞ ಹೋಮಿಯೋಪತಿ ವೈದ್ಯರು ರೋಗಿಯನ್ನು ಮತ್ತು ಅವನ ಲಕ್ಷಣಗಳನ್ನು ಪರೀಕ್ಷಿಸಿ ಹೋಮಿಯೋಪತಿ ಮಾತ್ರೆಗಳನ್ನು ನೀಡಿದಾಗ ಇಂತಹ ಕಾಯಿಲೆಗಳು ಹನ್ನೆರಡರಿಂದ ಇಪ್ಪತ್ನಾಲ್ಕು ಗಂಟೆಗಳೊಳಗೆ ವಾಸಿಯಾಗಿ , ರೋಗಿ ಸಂಪೂರ್ಣವಾಗಿ ಕಾಯಿಲೆಯಿಂದ ಗುಣವಾಗಿ ಸಾಮಾನ್ಯರಂತೆ ಆಗುತ್ತಾನೆ. ಬೇರೆ ವೈದ್ಯಪದ್ಧತಿಗಳು ಇಂತಹ ರೋಗಗಳಿಗೂ ಏಳರಿಂದ ಹತ್ತು ದಿನಗಳವರೆಗೆ ಮಾತ್ರೆಯನ್ನು ನೀಡುವ ವಾಡಿಕೆಯನ್ನು ಇಟ್ಟುಕೊಂಡಿವೆ . ಆದರೆ ಹೋಮಿಯೋಪತಿ ಇಂತಹ ಕಾಯಿಲೆಗಳನ್ನು ವಾಸಿಮಾಡುವ ನಿಟ್ಟಿನಲ್ಲಿ ಅತೀ ಸಮರ್ಪಕ ಹಾಗು ಅತೀ ತೀಕ್ಷ್ಣವಾಗಿ ಕೆಲಸ ಮಾಡಿ ಅತ್ಯಂತ ಕಡಿಮೆ ಸಮಯದಲ್ಲಿ ರೋಗಿಯನ್ನು ಗುಣಪಡಿಸುತ್ತದೆ.


ಎರಡನೆಯ ವಿಧ , ಇದರಲ್ಲಿ ಮನುಷ್ಯ ಅನುಭವಿಸುವ ಎಲ್ಲ ಆವರ್ತಕ ಖಾಯಿಲೆಗಳು (Chronic Diseases) ಸೇರುತ್ತವೆ. ಇವು ತಕ್ಷಣವಾಗಿ ಆಗುವಂತವಲ್ಲ . ಮಾನವನ ಜೀವದಲ್ಲಿ ಬೇರೂರಿ , ಸ್ವಲ್ಪ ಸ್ವಲ್ಪವಾಗಿ ಜೀವಚೈತನ್ಯದ ಮೇಲೆ ಒತ್ತಡ ಹಾಕುತ್ತ ಕ್ರಮೇಣ ಬೇರುಗಳು ಬೆಳೆದು ಬೇರೆ ಬೇರೆ ಅಂಗಾಂಗಗಳಿಗೆ ಹಬ್ಬಿ ಕೊನೆಗೆ ರೋಗಲಕ್ಷಣಗಳನ್ನು ಹೊರಹಾಕುವಲ್ಲಿ ಬಹಳ ಸಮಯ ಹಿಡಿದಿರುತ್ತದೆ. ಇಂತಹ ಹಲವಾರು ಖಾಯಿಲೆಗಳು ತಮ್ಮ ಪ್ರಾಥಮಿಕ ರೋಗಲಕ್ಷಣಗಳನ್ನು ಪ್ರಕಟಪಡಿಸುವ ಹೊತ್ತಿಗೆ ಖಾಯಿಲೆ ಮನುಷ್ಯನ ದೇಹವನ್ನೆಲ್ಲ ಆವರಿಸಿರುತ್ತದೆ . ವರ್ಷಗಳ ಕಾಲ ತನ್ನ ಬೇರುಗಳನ್ನೇ ಹರಡುವಲ್ಲಿ ಕೆಲಸ ಮಾಡುವ ಇಂಥ ಕಾಯಿಲೆಗಳು ಯಾವುದಾದರೂ ಅಂಗಾಂಗದಲ್ಲಿ ವ್ಯಕ್ತಿಗನುಗುಣವಾಗಿ ನೆಲೆಯೂರಿ ಕಾಯಿಲೆಗೆ ಸ್ಪಷ್ಟ ರೂಪ ಕೊಡುತ್ತದೆ. ಅಲೋಪತಿ ವೈದ್ಯಪದ್ಧತಿ ಆ ಕಾಯಿಲೆಯ ಬೇರನ್ನು ಗುಣಪಡಿಸುವಲ್ಲಿ ಯೋಚಿಸುವ ಬದಲು ಕೇವಲ ಕಾಯಿಲೆಯ ಮೈದಳೆದ ಅಭಿವ್ಯಕ್ತಿಯ ಲಕ್ಷಣಗಳನ್ನು ಸುಮ್ಮನಾಗಿಸುವ ನಿಟ್ಟಿನಲ್ಲಷ್ಟೇ ಕೆಲಸ ಮಾಡುತ್ತದೆ. ಇಂತಹ ಕಾಯಿಲೆಗಳು ದೇಹದಲ್ಲಿ ಬೆಳೆಯಲು ಬಹಳ ವರ್ಷ ಸಮಯ ಹಿಡಿದು ತನ್ನ ಬೇರುಗಳನ್ನು ಅವನ ಅಸ್ತಿತ್ವದ ಆಳದೊಳಕ್ಕೆ ಹರಡಿರುವ ಕಾರಣ ಅದನ್ನು ಹೋಮಿಯೋಪತಿ ಇಂದ ಗುಣಪಡಿಸೋಕೂ ಸಮಯ ಹಿಡಿಯುತ್ತದೆ. ಜೀವಚೈತನ್ಯವನ್ನು ಉತ್ಸುಕಗೊಳಿಸಿ ಕಾಯಿಲೆಯನ್ನು ಬೇರುಸಮೇತ ತುಂಡು ಮಾಡಿ ಮನುಷ್ಯನನ್ನು ಸಂಪೂರ್ಣ ಕಾಯಿಲೆ ಮುಕ್ತ ಮಾಡೋದಕ್ಕೆ ಸಮಯ ಸಹಜವಾಗಿಯೇ ಹಿಡಿಯುತ್ತದೆ.


ಆದರೆ , ಸಾಮಾನ್ಯ ಅಭಿಪ್ರಾಯದ ಹಾಗೆ ಒಂದು ಕಾಯಿಲೆ ವಾಸಿಯಾಗು ಹಲವು ವರ್ಷಗಳೇನು ಹಿಡಿಯುದಿಲ್ಲ. ಸರಿಯಾಗಿ ಅಧ್ಯಯನ ಮಾಡಿ , ರೋಗಲಕ್ಷಣಗಳನ್ನು ಹೋಮಿಯೋಪತಿ ಸೂತ್ರಗಳ ಸಹಾಯದೊಂದಿಗೆ ವಿಶ್ಲೇಷಿಸಿ ನೀಡುವ ಮಾತ್ರೆಗಳು, ರೋಗಿಯ ದೇಹದಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗುತ್ತವೆ . ಮಾತ್ರೆ ತಗೆದುಕೊಂಡ ಕೆಲವೇ ದಿನಗಳಲ್ಲಿ ರೋಗಿಗೆ , ಕಾಯಿಲೆ ವಾಸಿಯಾಗುತ್ತಿರುವ, ಕಾಯಿಲೆಯಿಂದ ತನ್ನ ದೇಹಕ್ಕೆ ಆಗುತ್ತಿದ್ದ ಒತ್ತಡ ಸರಿದು ಆಹ್ಲಾದಕರ ಅನುಭೂತಿ ಆಗುತ್ತಿರುವ ಅನುಭವ ಆಗುತ್ತದೆ. ಕಾಯಿಲೆಯೂ ಸಹ ಕೆಲವು ತಿಂಗಳಿಂದ ಒಂದೆರಡು ವರ್ಷಗಳಲ್ಲಿ ಸಂಪೂರ್ಣವಾಗಿ ವಾಸಿಯಾಗುತ್ತದೆ. ಸಮಯ ಕಾಯಿಲೆಯಿಂದ ಕಾಯಿಲೆ ಗೆ ವ್ಯತ್ಯಾಸ ಆಗುತ್ತದೆ. ಕೆಲವು ಕಾಯಿಲೆಗಳು ಒಂದೆರಡೇ ತಿಂಗಳಲ್ಲಿ ವಾಸಿಯಾಗುತ್ತವೆ. ಕೆಲವು ಕಾಯಿಲೆಗಳಿಗೆ ಒಂದು ವರ್ಷದ ವರೆಗೂ ಹಿಡಿಯುತ್ತದೆ. ಉದಾಹರಣೆಗೆ , ಹೊಸದಾಗಿ ಕಂಡುಹಿಡಿಯಲ್ಪಟ್ಟ ಮಧುಮೇಹ , ರಕ್ತದೊತ್ತಡ , ಮೂಲವ್ಯಾಧಿಯಂತಹ ಸಮಸ್ಯೆಗಳು ಮೂರರಿಂದ ನಾಲ್ಕು ತಿಂಗಳಲ್ಲೇ ವಾಸಿಯಾಗುತ್ತವೆ. ಆದರೆ ಅದೇ ಖಾಯಿಲೆಗಳು ಬಹಳ ವರ್ಷ ಗಳಿಂದ ಇದ್ದಾಗ, ರೋಗಿಗಳು ಅದಕ್ಕೆ ಅಲೋಪತಿ ಔಷಧಿಗಳನ್ನು ಸಹ ಬಹಳ ವರ್ಷಗಳಿಂದ ತಗೆದುಕೊಳ್ಳುತ್ತಿರುವಾಗ, ಮೊದಲು ಆ ಔಷಧಿಗಳ ಪ್ರಭಾವದಿಂದ ರೋಗಿಗಳನ್ನು ಹೊರತಂದು ಹಾಗೆಯೇ ಕಾಯಿಲೆಯನ್ನು ವಾಸಿ ಮಾಡುವಲ್ಲಿ ಸ್ವಲ್ಪ ಜಾಸ್ತಿ ಸಮಯವೇ ಹಿಡಿಯುತ್ತದೆ. ಥೈರಾಯಿಡ್, ಪಿ.ಸಿ.ಓ.ಡಿ. ತರಹದ ಸಮಸ್ಯೆಗಳಿಗೂ ಜಾಸ್ತಿ ಸಮಯದ ಚಿಕಿತ್ಸೆ ಬೇಕಾಗುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಮಾತ್ರ, ಅಂತಹ ಕಾಯಿಲೆಗಳು ಬಹಳ ಆರಂಭಿಕ ಘಟ್ಟದಲ್ಲಿ ಇದ್ದಾಗ ಮಾತ್ರ ಅವನ್ನು ವಾಸಿ ಮಾಡಲು ಸಾಧ್ಯವಾಗುತ್ತದೆಯೇ ಹೊರತು, ಕ್ಯಾನ್ಸರ್ ರೋಗ ದೇಹಕ್ಕೆಲ್ಲ ಹರಡಿ ಕೊನೆಯ ಹಂತಕ್ಕೆ ಬಂದಾಗ ಅದನ್ನು ವಾಸಿ ಮಾಡಲಾಗುವುದಿಲ್ಲ. ಬದಲಿಗೆ ರೋಗಿಯನ್ನು ಕುಗ್ಗಿಸುವ, ನಿತ್ಯಕರ್ಮಗಳನ್ನೂ ಮಾಡದಂತೆ ನಿರ್ಬಂಧಿಸುವ ಲಕ್ಷಣಗಳನ್ನು ಮಾತ್ರ ಕಡಿಮೆ ಮಾಡಬಹುದು.


ಎಲ್ಲಕ್ಕಿಂತ ಹೆಚ್ಚಾಗಿ ಒಮ್ಮೆ ಹೋಮಿಯೋಪತಿ ಯಲ್ಲಿ ಖಾಯಿಲೆ ವಾಸಿಯಾದರೆ, ಅದು ವಾಪಸ್ ಬರುವ ಸಾಧ್ಯತೆಗಳು ಬಹಳ ಕಡಿಮೆಯಾಗಿರುತ್ತವೆ.


ಹೋಮಿಯೋಪತಿ ಅತ್ಯಂತ ಕ್ಲಿಷ್ಟಕರವಾದ ಪದ್ಧತಿ . ಒಬ್ಬ ರೋಗಿಗೆ ಏನಿಲ್ಲವೆಂದರೂ ಅರ್ಧ ಗಂಟೆ ನೀಡಿ ಅವರ ಲಕ್ಷಣಗಳನ್ನು ಪಟ್ಟಿ ಮಾಡಿ, ಅವರ ರೋಗದ ಬಗ್ಗೆ ಆಳವಾಗಿ ತಿಳಿದು, ಅವರ ರೋಗಲಕ್ಷಣಗಳಿಗೆ ಅನುಗುಣವಾಗುವಂತೆ ಔಷದ ನೀಡಬೇಕು . ಪ್ರತಿಯೊಬ್ಬ ಮನುಷ್ಯನ ವೈಯಕ್ತಿಕ ರೋಗಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬೇರೆ ಆಗಿರೋದರಿಂದ ಅತ್ಯಂತ ಸೂಕ್ಷ್ಮವಾಗಿ ಅಧ್ಯನ ಮಾಡಿ ಮಾತ್ರೆಗಳನ್ನು ನೀಡಬೇಕು . ಇಂತಹ ಸಮಯದಲ್ಲಿ ಇತ್ತೀಚಿಗೆ ವೃತ್ತಿ ಆರಂಭಿಸಿದ ವೈದರಲ್ಲಿ , ಅನುಭವ ಇದ್ದರೂ ನಿರ್ಲಕ್ಷ್ಯದಿಂದ ಔಷಧಿಗಳನ್ನು ನೀಡುವ ವೈದ್ಯರಿಂದ ಖಾಯಿಲೆ ವಾಸಿಯಾಗೋದು ಇನ್ನು ತಡವಾಗುತ್ತದೆ. ಆದರೆ ಅದು ವೈದ್ಯರ ಜವಾಬ್ದಾರಿ ಆಗುತ್ತದೆಯೇ ಹೊರತು ಪದ್ಧತಿಯ ದೋಷವಾಗಿರುವುದಿಲ್ಲ.


ಸಾಮಾನ್ಯ ಜನರು ಹೋಮಿಯೋಪತಿ ನಿಧಾನ ಎನ್ನುವ ಅಭಿಪ್ರಾಯವನ್ನು ಅಲೋಪತಿ ವಿಧಾನಕ್ಕೆ ಹೋಲಿಸಿ ಹೇಳುತ್ತಾರೆ. ಅವರ ಅಭಿಪ್ರಾಯದಲ್ಲಿ ಕೆಮ್ಮು ನೆಗಡಿಗಳು, ಜ್ವರ, ವಾಂತಿ ಬೇಧಿಗಳು ಅಲೋಪಥಿ ಪದ್ಧತಿಯ ಒಂದೆರಡು ಇಂಜೆಕ್ಷನ್ , ಅಥವಾ ಹೆಚ್ಚು ಡೋಸ್ ನಲ್ಲಿ ವಾಸಿ ಆಗುತ್ತವೆ ಆದರೆ ಹೋಮಿಯೋಪತಿ ಅಲ್ಲಿ ಹಾಗೆ ಆಗೋದಿಲ್ಲ ಅಂತ ಅನ್ನಿಸುತ್ತದೆ. ಆದರೆ ಅವರು ತಮ್ಮ ಕೆಮ್ಮು ನೆಗಡಿಗಳಿಗೆ , ಜ್ವರಕ್ಕೆ, ವಾಂತಿ ಬೇಧಿಗೆ ಎಂದೂ ಹೋಮಿಯೋಪತಿಯನ್ನು ಅವಲಂಭಿಸಿರುವುದಿಲ್ಲ . ಜ್ವರ , ಕೆಮ್ಮು ನೆಗಡಿಗಳಿಗೆ ಅಲೋಪತಿ ಮಾತ್ರೆ ಇಂಜೆಕ್ಷನ್ ಗಳಿಗಿಂತಲೂ ವೇಗವಾಗಿ ಹೋಮಿಯೋಪತಿ ಮಾತ್ರೆಗಳು ಕೆಲಸ ಮಾಡುತ್ತವೆ ಅನ್ನೋದನ್ನು ಅವರು ತಿಳಿಯದಾಗಿರುತ್ತಾರೆ.

ದೊಡ್ಡ ದೊಡ್ಡ ಖಾಯಿಲೆಗಳನ್ನು ವಾಸಿ ಮಾಡುವಲ್ಲಿ ಹೋಮಿಯೋಪತಿ ತಗೆದುಕೊಳ್ಳೋ ಸಮಯವನ್ನು , ಕೆಮ್ಮು, ನೆಗಡಿ, ಜ್ವರವನ್ನು ಬೇಗ ವಾಸಿ ಮಾಡುವ ಅಲೋಪತಿ ಮಾತ್ರೆಗಳಿಗೆ ಹೋಲಿಸಿದಾಗ ಸಹಜವಾಗಿ ಹೋಮಿಯೋಪತಿ ನಿಧಾನ ಎನ್ನಿಸುತ್ತದೆಯೇ ಹೊರತು ಅದೇ ಸತ್ಯವಲ್ಲ. ಸ್ವಲ್ಪ ವಿಶಾಲ ಮನಸ್ಸಿನಿಂದ ಯೋಚಿಸಿದಾಗ ಸತ್ಯ ಕಣ್ಮುಂದೆಯೇ ಸ್ಪಷ್ಟವಾಗಿ ಕಾಣುತ್ತದೆ.

ಚಿಕ್ಕ ಪುಟ್ಟ ಜ್ವರಗಳಿಗೆ ಚುಚ್ಚುಮದ್ದು (injection), ಬಾಟಲಿ ಏರಿಸಿಕೊಳ್ಳುವುದು (I.V infusion), Anti-Biotic ಗಳನ್ನು ತಗೆದುಕೊಳ್ಳುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಮಾತಾಡಲು ಇನ್ನೊಂದು ಲೇಖನವನ್ನೇ ಬರೆಯುತ್ತೇನೆ.


ಪ್ರಖ್ಯಾತ ಹೋಮಿಯೋಪತಿ ವೈದ್ಯ ಹಾಗು ವಿಜ್ಞಾನಿ ಜಾರ್ಜ್ ವಿಥಾಲ್ಕಸ್ (George Vithoulkas) ರವರ ‘Levels of Health’ ಸಿದ್ಧಾಂತದ ಪ್ರಕಾರ ಪ್ರತಿಯೊಬ್ಬ ಮನುಷ್ಯನ ಮೂಲಭಾತ ಆರೋಗ್ಯದ ಸ್ಥಿತಿ ಒಂದೇ ಆಗಿರುವುದಿಲ್ಲ. ಕೆಲವು ವ್ಯಕ್ತಿಗಳು ಹುಟ್ಟಿನಿಂದಲೇ ಒಳ್ಳೆಯ ಆರೋಗ್ಯವನ್ನು ಹೊಂದಿರುತ್ತಾರೆ , ಇನ್ನು ಕೆಲವರಲ್ಲಿ ಹುಟ್ಟಿನಿಂದಲೇ ಆರೋಗ್ಯ ಅಷ್ಟು ಸರಿಯಿರುವುದಿಲ್ಲ, ಅಂಥವರು ಮುಂದೆ ಜೀವನದಲ್ಲಿ ಬೇರೆ ಬೇರೆ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಈ ಸಿದ್ಧಾಂತವನ್ನು ಮುಂದೆ ಬರಿಯುವ ಲೇಖನಗಳಲ್ಲಿ ಇನ್ನು ಸ್ಪಷ್ಟವಾಗಿ ವಿಸ್ತಾರವಾಗಿ ತಿಳಿಸುತ್ತೇನೆ.


ಒಟ್ಟಾರೆಯಾಗಿ , ಹೋಮಿಯೋಪತಿ ಔಷದಗಳು ನಿಧಾನವೆಂಬ ಅಭಿಪ್ರಾಯ ಸುಳ್ಳಾಗಿದ್ದು , ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಹಲವು ವರ್ಷಗಳ ಸುಳ್ಳು ಮಾಹಿತಿಯ ಪ್ರಚಾರದಿಂದ ಜನರ ಮನಸ್ಸಿನಲ್ಲಿ ಈ ಅಭಿಪ್ರಾಯ ಉಳಿದುಬಿಟ್ಟಿದೆಯೇ ಹೊರತು ಇದೇ ನಿಜವಲ್ಲ .ಹೋಮಿಯೋಪತಿ ವ್ಯಕ್ತಿಗನುಗುಣವಾಗಿ , ಖಾಯಿಲೆಗೆ ಅನುಗುಣವಾಗಿ ಸರಿಯಾದ ಸಮಯ ತಗೆದುಕೊಂಡು, ಅತ್ಯಂತ ಸುಲಭ ಸಹಜ ರೀತಿಯಲ್ಲಿ ಕ್ಷಿಪ್ರವಾಗಿ ಔಷದಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ ಅಭಿಪ್ರಾಯಗಳ ಅಲೆಗೆ ಸಿಲುಕದೆ, ನೇರವಾಗಿ ಹೋಮಿಯೋಪತಿ ವೈದ್ಯರ ಬಳಿ ಹೋಗಿ ತಮ್ಮ ಖಾಯಿಲೆಗಳಿಗೆ ಔಷದ ತಗೆದುಕೊಂಡ ಮೇಲೆ ಜನರಿಗೇ ವಾಸ್ತವದ ಅರಿವಾಗುತ್ತದೆ . ಇನ್ನೇನಾದರೂ ಅನುಮಾನ, ಆತಂಕ , ಪ್ರಶೆಗಳಿದ್ದರೆ ಯಾವುದೇ ಮುಜುಗರವಿಲ್ಲದೆ ಕೇಳಿ ಉತ್ತರಗಳನ್ನು ಕಂಡುಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೆ ಹೋಮಿಯೋಪತಿ ಎಂಬ ಅತ್ಯುತ್ತಮ ವೈದ್ಯಪದ್ಧತಿಯ ಉಪಯೋಗ ಪಡೆದುಕೊಳ್ಳಿ.


- ಡಾ.ನಂದೀಶ್ ಬಿ.ಎಂ

8317312948281 views2 comments

2 Comments


Dr Rachana R
Dr Rachana R
May 01, 2023

Very informative to general public and clearly represented.. All the best to all your further articles on Awareness about Homoeopathy 👍🙂

Like
Nandeesh BM
Nandeesh BM
May 01, 2023
Replying to

Thank you very much 😊

Like
bottom of page