top of page

ಆಧುನಿಕ ಜಗತ್ತಿನ ಶ್ರೇಷ್ಠ ಮಹಾಗುರು - ಪ್ರೊ ಜಾರ್ಜ್ ವಿಥೋಲ್ಕಾಸ್
ಸುಮಾರು ಎಂಭತ್ತು ವರ್ಷಗಳ ಹಿಂದೆ . ಮೊದಲನೇ ಮಹಾಯುದ್ಧದ ಹೊಡೆತದಿಂದ ನಾಗರೀಕತೆ ಚೇತರಿಸಿಕೊಳ್ಳೋ ಮೊದಲೇ ಆಡಳಿತಶಾಹಿಗಳ ಕುತಂತ್ರ, ಜನಾಂಗ ಬೇಧದ ನೀತಿಗಳ ಕಪಿಮುಷ್ಟಿಗೆ ಸಿಲುಕಿದ ಪ್ರಪಂಚ ಹತ್ತೇ ವರ್ಷಗಳಲ್ಲಿ ಮತ್ತೆ ಎರಡನೇ ಮಹಾಯುದ್ಧಕ್ಕೆ ಸಿಕ್ಕು ನಲುಗಿತು.

ಪ್ರಪಂಚದ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಈ ಮಹಾಯುದ್ಧದ ಕರಾಳ ಛಾಯೆ ಆವರಿಸಿಕೊಂಡಿತು. ಅದರಲ್ಲೂ ಐರೋಪ್ಯ ರಾಷ್ಟ್ರಗಳಂತೂ ಹಿಟ್ಲರ್ ನ ಹೊಡೆತಕ್ಕೆ ತತ್ತರಿಸಿದವು .

ಯೂರೋಪ್ ಖಂಡದ ದಕ್ಷಿಣ ಭಾಗದಲ್ಲಿರೋ ‘ಗ್ರೀಸ್’ ದೇಶವಂತೂ ಈ ಆಘಾತಕ್ಕೆ ಹೇಳತೀರದಂತೆ ನಲುಗಿತು . ಸಾವಿರಾರು ವರ್ಷಗಳ ಇತಿಹಾಸವುಳ್ಳ ವಿಶಿಷ್ಟ ಭೂಭಾಗ ಮಹಾಯುದ್ಧಕ್ಕೆ ಮಖಾಡೆ ಮಲುಗಿತ್ತು . ಸುಮಾರು ೧೯೪೨ ನೇ ಇಸವಿ ಇರಬೇಕು . ಗ್ರೀಸ್ ದೇಶದ ರಾಜಧಾನಿಯಲ್ಲಿ ಹತ್ತು ವರ್ಷದ ಬಾಲಕ ತನ್ನ ತಂದೆ ತಾಯಿಯನ್ನು ಯುದ್ಧದ ಹೊಡೆತಕ್ಕೆ ಕಳೆದುಕೊಂಡು , ತನ್ನ ಸಂಬಂಧಿಕರೆಲ್ಲ ಕಾಣೆಯಾಗಿ ಯಾವ ದಿಕ್ಕೂ ತೋಚದೆ ಅನಾಥನಾಗುತ್ತಾನೆ. ಕೇವಲ ಒಂದೆರಡು ವರ್ಷಗಳ ಹಿಂದೆ ಇದ್ದ ಶಾಂತಿ , ಪ್ರೀತಿ, ನೆಮ್ಮದಿ ಎಲ್ಲವೂ ಮಾಯವಾಗಿ ಸುಂದರವಾಗಿದ್ದ ದೇಶ ರಣರಂಗವಾಗಿದ್ದ ಸನ್ನಿವೇಶ, ಈ ಅನಾಥ ಹುಡುಗನಿಗೆ ಜೀವನದ ಕ್ಷಣಿಕತೆಯ ಸತ್ಯದರ್ಶನ ತೋರಿ ಅವನ ಹೃದಯದಲ್ಲಿ ಎಂದೂ ಅಳಿಸಲಾಗದ ಅಚ್ಚನ್ನು ಒತ್ತುತ್ತದೆ .

ಚಿಕ್ಕ ವಯಸ್ಸಿಗೇ ತನ್ನ ವಯೋಸಹಜತೆಗೆ ಮೀರಿದ ಆಘಾತಗಳನ್ನು ಅನುಭವಿಸಿದ ಹುಡುಗನ ಮನಸ್ಸಿನಲ್ಲಿ ಜೀವನದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಲಾರಂಭಿಸುತ್ತವೆ . ಜೀವನ ಎಂದರೆ ಏನು ? ಅದರ ಉದ್ದೇಶವೇನು ? ಮನುಷ್ಯರು ಪರಸ್ಪರ ಯಾಕೆ ಕಚ್ಚಾಡುತ್ತಾರೆ ? ಮನುಷ್ಯ ಯಾಕೆ ನರಳಾಟವನ್ನು ಅನುಭವಿಸಬೇಕು ? ಎಲ್ಲರು ಶಾಂತಿಯಿಂದ ಇರಬಹುದಾದರೆ ಯುದ್ಧದ ಅಗತ್ಯವಾದರೂ ಏನು ? ಇತ್ಯಾದಿ ಪ್ರಶ್ನೆಗಳು ಆ ಬಾಲಕನ ಮನದಲ್ಲಿ ಮನಮಾಡುತ್ತವೆ. ಯುದ್ಧದ ಭೀಕರತೆಯ ಇನ್ನೊಂದು ಮುಖವಾಗಿ ಗ್ರೀಸ್ ದೇಶದಲ್ಲಿ ಕ್ಷಾಮವೂ ಶುರುವಾಗಿ ಆಹಾವಿಲ್ಲದೆ ಜನ ಪರದಾಡುವ ಪರಿಸ್ಥಿತಿಯೂ ಬರುತ್ತದೆ . ಯುದ್ಧದ ಅತಿಮಾನುಷ ಶಕ್ತಿ ಮತ್ತು ಅದು ಮಾಡಬಹುದಾದಹ ವಿಧ್ವಂಸ, ಅದರಿಂದಾಗುವ ನರಳಾಟ ಎಲ್ಲವನ್ನು ಕಂಡು ಆ ಹುಡುಗ ಹೇಗಾದರೂ ಎಲ್ಲರ ಮನಸ್ಸಿನಲ್ಲಿ ಶಾಂತಿಯ ಬೀಜವನ್ನು ಬಿತ್ತಿ ಪ್ರಪಂಚವನ್ನು ಸೌಹಾರ್ದತೆಯತ್ತ ಕೊಂಡೊಯ್ಯಬೇಕು ಎಂಬ ಕನಸು ಕಾಣುತ್ತಾನೆ.


ಯುದ್ಧದ ಭೀಕರತೆಗೆ ಆದ ಆರ್ಥಿಕ ಹೊಡೆತ , ಕ್ಷಾಮದಿಂದಾದ ಅನಾರೋಗ್ಯಗಳನ್ನು ಅನುಭವಿಸುತ್ತಲೇ ಹುಡುಗ ಅಥೆನ್ಸ್ ನಗರದಲ್ಲಿ ಬೆಳೆಯುತ್ತಾನೆ . ಅವರು ಮಾಡಿರುವ ಸಂಕಲ್ಪವನ್ನು ಸಾಕ್ಷಾತ್ಕರಿಸಲೆಂದೋ , ಅವರಿಂದ ಮನುಕುಲಕ್ಕೆ ಆಗಬಹುದಾದ ಉಪಕಾರದ ಕಾರಣವಾಗಿಯೋ ಆ ಹುಡುಗ ತನ್ನೆಲ್ಲ ಕಷ್ಟಗಳ ನಡುವೆಯೇ ಬೆಳೆದು ಕಟ್ಟಡ ವಾಸ್ತುಶಿಲ್ಪಿ ಆಗುತ್ತಾರೆ. ತನ್ನ ಓದಿನ ಅನುಭವ ಮತ್ತು ಪ್ರಬುದ್ಧ ಬೌದ್ಧಿಕತೆಯೊಂದಿಗೆ ತನ್ನ ದೇಶದಲ್ಲೇ ಯಶಸ್ವೀ ಕಟ್ಟಡ ವಾಸ್ತುಶಿಲ್ಪ ತಜ್ಞನಾಗುವತ್ತ ಅವರು ಹೆಜ್ಜೆಯಿಡುತ್ತಿರುತ್ತಾರೆ . ಆದರೆ ವಿಧಿ ಅವರ ಇಪ್ಪತ್ತೇಳನೇ ವಯಸ್ಸಿನಲ್ಲಿ ಮತ್ತೊಂದು ಸಂಕಷ್ಟವನ್ನು ತಂದೊದಗಿಸುತ್ತದೆ.

ವಿಧಿಯ ಆಟವನ್ನು ಇನ್ನೂ ಮಾನವ ಗ್ರಹಿಸಲು ಪರದಾಡುತ್ತಿದ್ದಾನೆ ಎಂದು ಹೇಳಲು ಈ ಘಟನೆಯೇ ಸೂಕ್ಷ್ಮ ನಿದರ್ಶನ.

ಕಾರಿನಲ್ಲಿ ಚಲಿಸುತ್ತಿದ್ದ ಇಪ್ಪತ್ತೇಳರ ಈ ಯುವಕ ಕಾರ್ ಅಪಘಾತಕ್ಕೆ ಒಳಗಾಗುತ್ತಾರೆ. ಇಡೀ ದೇಹ ಅಪಘಾತದ ಹೊಡೆತಕ್ಕೆ ನಲುಗಿ ಹಲವು ದಿನಗಳ ಕಾಲ ಹಾಸಿಗೆಯಿಂದ ಹೊರಬರಲಾರರು ಎಂದು ಡಾಕ್ಟರ್ಗಳು ನಿರ್ಧರಿಸುತ್ತಾರೆ. ಬಾಲ್ಯದಿಂದಲೂ ಚಟುವಟಿಕೆಯಿಂದಿದ್ದ ಇವರಿಗೆ ಅಷ್ಟೊಂದು ದಿನ ಹಾಸಿಗೆ ಹಿಡಿದು ಮಲಗುವುದು ಪೇಚಿಗೆ ಸಿಲುಕಿಸಿದಂತಾಗುತ್ತದೆ . ಆದರೂ ಬೇರೆ ವಿಧಿಯಿಲ್ಲದೇ ಮಲಗಿರುವಾಗ ದೈವದ ಆಶೀರ್ವಾದ ಎಂಬಂತೆ ಅವರು ಮಲಗಿರುವ ಸ್ಥಳದ ಪಕ್ಕದಲ್ಲಿ ಒಂದು ಪುಟ್ಟದಾದ, ಆದರೆ ಬಹಳ ದಪ್ಪವಾದ ಪುಸ್ತಕ ಕಣ್ಣಿಗೆ ಬೀಳುತ್ತದೆ . ಅಷ್ಟೂ ಹೊತ್ತು ಮಲಗಿ ಬೇಸರಗೊಂಡು ಪುಸ್ತಕ ಯಾವುದೆಂದು ನೋಡಲು ಕೈಗೆತ್ತಿಕೊಳ್ಳುತ್ತಾರೆ. ಆದರೆ ಮೇಲೆ ‘ Boericke Materia Medica - by William Boericke’ ಎಂಬ ಹೆಸರು ಬರೆದಿರುತ್ತದೆ. ಇದು ಯಾವ ವಿಷಯದ ಬಗ್ಗೆ ಬರೆದಿರೋ ಪುಸ್ತಕ ನೋಡೋಣ ಅಂತ ಅವರು ಮೊದಲ ಪುಟ ಓದುತ್ತಾರೆ .


ಕಾಲ ಕಳೆದ ಅನುಭವ ದೇಹಕ್ಕಾದರೂ ಮನಸ್ಸಿಗೆ ಅದರ ಸ್ವಲ್ಪ ಅನುಭವವೂ ಆಗದಂತೆ ಅವರು ಆ ಪುಸ್ತಕದಲ್ಲಿ ಮುಳುಗುತ್ತಾರೆ, ಅದರಲ್ಲಿರೋ ಜ್ಞಾನ ಅವರ ಮನಸ್ಸು ಬುದ್ಧಿಯನ್ನು ಎಷ್ಟು ಆಕರ್ಷಿಸುತ್ತದೆಂದರೆ ಕೇವಲ ಎರಡು-ಮೂರು ದಿನಗಳಲ್ಲೂ ಅವರು ಇಡೀ ೮೦೦ ಪುಟಗಳ ಪುಸ್ತಕವನ್ನು ಓದಿ ಮುಗಿಸುತ್ತಾರೆ. ಅಮೇರಿಕಾ ದೇಶದ ಪ್ರಖ್ಯಾತ ಹೋಮಿಯೋಪತಿ ವೈದ್ಯ ‘William Boreicke’ ಬರೆದಿರುವ ಹೋಮಿಯೋಪತಿ ವೈದ್ಯಪದ್ಧತಿಯಲ್ಲಿ ಬಳಲಸಲಾಗುವ ಹಲವು ಔಷಧಿಗಳ ಸಂಕ್ಷಿಪ್ತ ವಿವರಗಳನ್ನೊಳಗೊಂಡಿರೋ ಪುಸ್ತಕವನ್ನು ಈ ಯುವಕ ಎಂದೂ ಓದದ ಆಸಕ್ತಿಯಲ್ಲಿ ಓದಿ ಮುಗಿಸುತ್ತಾರೆ.

ಹೋಮಿಯೋಪತಿ ಅನ್ನೋ ಹೆಸರನ್ನಷ್ಟೇ ಕೇಳಿ ಆ ವೈದ್ಯಪದ್ಧತಿಯ ಬಗ್ಗೆ ಹೆಚ್ಚಾದ ಪರಿಚಯವೇನು ಇಲ್ಲದ ಯುವಕ ಆ ಪುಸ್ತಕವನ್ನು ಓದಿದಾಗಿನಿಂದ ಹೋಮಿಯೋಪತಿ ಬಗ್ಗೆ ತೀವ್ರವಾಗಿ ಆಕರ್ಷಿತರಾಗುತ್ತಾರೆ. ತಮ್ಮ ಸ್ನೇಹಿತರನ್ನೆಲ್ಲ ಕೇಳಿ, ವಿಚಾರಿಸಿ ಈ ವೈದ್ಯಪದ್ಧತಿಯ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನಿಸುತ್ತಾರೆ . ದೇಶದ ಹಲವಾರು ಗ್ರಂಥಾಲಯಗಳಲ್ಲಿ ಹುಡುಕಾಡಿ ಹೋಮಿಯೋಪತಿ ಪದ್ಧತಿಯ ಕುರಿತಾದ ಮುಖಯ ಪುಸ್ತಕಗಳಾದ ‘Organon of Medicine by Hahnemann’, ‘Kent’s lectures on Homeopathic Philosophy and Materia Medica’, ‘Kents lesser writings’ ಮೊದಲಾದ ಪುಸ್ತಕಗಳನ್ನು ಕೊಂಡು ಓದುತ್ತಾರೆ . ವೈದ್ಯಕೀಯ ಲೋಕದ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲದ ಆದರೆ ಬಾಲ್ಯದಿಂದಲೂ ತರ್ಕಬದ್ಧ , ಗಣಿತಬದ್ಧ ಆಲೋಚನೆ ಮಾಡುವ ಈ ವ್ಯಕ್ತಿಗೆ ತಾನು ಓದಿದ ಹೋಮಿಯೋಪತಿ ಪುಸ್ತಕಗಳಲ್ಲಿ ಇರುವ ವಿವರಗಳು , ವಿಶ್ಲೇಷಣೆಗಳು , ಉಪನ್ಯಾಸಗಳು ಬಹಳ ತರ್ಕಬದ್ಧ,ಜ್ಞಾನಪೂರ್ಣ ಮತ್ತು ಸತ್ಯಕ್ಕೆ ಹತ್ತಿರವಾದುವು ಎಂದು ಗಮನಿಸುತ್ತಾರೆ.


ವಿಶ್ವಾದಂತ್ಯ ಪ್ರಮುಖ ಹೋಮಿಯೋಪತಿ ವೈದ್ಯರು ಈ ವೈದ್ಯಪದ್ಧತಿಯ ಮೂಲಕ ಜನರಿಗೆ ಚಿಕಿತ್ಸೆ ನೀಡಿ ಕಾಯಿಲೆಗಳನ್ನು ಗುಣಪಡಿಸಿರುವುದನ್ನು ಓದಿ ಬೆರಗಾಗುತ್ತಾರೆ. ಪ್ರಪಂಚದಲ್ಲಿ ಮನುಷ್ಯನ ಕಾಯಿಲೆಯ ಗುಣಸ್ವಭಾವನ್ನು ಅತ್ಯಂತ ಆಳದವರೆಗೆ ತಿಳಿದು ಅಧ್ಯಯನ ಮಾಡಿ ಕಾಯಿಯೆಯನ್ನು ಬೇರುಸಮೇತ ವಾಸಿಮಾಡುವ ತತ್ವಗಳು, ಸೂಚನೆಗಳು ಮತ್ತು ಪ್ರಪಂಚಾದ್ಯಂತ ಕಾಯಿಲೆಗಳು ಸಂಪೂರ್ಣವಾಗಿ ವಾಸಿಯಾದಂಥ ನಿದರ್ಶನಗಳನ್ನು ಕಂಡು ಓದಿ ನಿಬ್ಬೆರಗಾದರು . ಈ ಪದ್ಧತಿಯ ಬಗ್ಗೆ ತಮ್ಮಲ್ಲಿ ಮೂಡಿದ ಆಸಕ್ತಿಯನ್ನು ಗಮನಿಸಿ ತಾವು ಸುಮಾರು ವರ್ಷಗಳ ಮೊದಲು ಜನರ ಏಳ್ಗೆಗಾಗಿ ಮಾಡಿದ ಸಂಕಲ್ಪದ ತಿರುಳನ್ನು ಅರಿತರು .


ತಮ್ಮ ಜೀವನದಲ್ಲಾಗಿರೋ ಅನುಭವಗಳು , ನಡೆದಿರೋ ಘಟನೆಗಳು, ಕಾಲ ತೋರಿಸಿದ ತಿರುವುಗಳ ಹಿಂದಿನ ಮರ್ಮವನ್ನು ಅರಿತ ಯುವಕನಿಗೆ ತನ್ನ ಉದ್ದೇಶದ ಸ್ಪಷ್ಟ ರೂಪ ಸಿಕ್ಕಿತ್ತು. ತಾನು ಮಾಡುತ್ತಿದ್ದ ಕೆಲಸದಿಂದ ವಿರಾಮ ತಗೆದುಕೊಂಡು ಹೋಮಿಯೋಪತಿ ಪದ್ಧತಿಯನ್ನು ಆಳವಾಗಿ ಎಲ್ಲಿ ಅಧ್ಯನ ಮಾಡಬಹುದು ಎನ್ನುವ ಹುಡುಕಾಟ ಪ್ರಾರಂಭಿಸಿದರು . ಇಡೀ ಯುರೋಪ್ ನಲ್ಲಿ ಹುಡುಕಾಡಿದಾಗ ಅಲ್ಲಿ ಹೋಮಿಯೋಪತಿ ವೈದ್ಯಪದ್ಧತಿಯ ಮೂಲತತ್ವಗಳನ್ನು ಧಿಕ್ಕರಿಸಿ ತಮ್ಮದೇ ಆದ ‘Polypharmacy’ ಮಾರ್ಗವನ್ನು ಅನುಸರಿಸಿ ಹೋಮಿಯೋಪತಿ ಹೆಸರಿನಲ್ಲಿ ತಮ್ಮನ್ನು ಹಲವಾರು ಮಾರಾಟ ಮಾಡಿಕೊಳ್ಳುತ್ತಿದ್ದನ್ನು ಕಂಡ ಇವರು ಈ ಸ್ಥಳದಲ್ಲಿ , ಇಂಥವರ ಕಡೆ ನಿಜವಾದ ಹೋಮಿಯೋಪತಿ ಬಗ್ಗೆ ಕಲಿಯಲು ಸಾಧ್ಯವಿಲ್ಲವೆಂದು ನಿರ್ಧರಿಸಿ ಯುರೋಪ್ ನ ಆಚೆ ಎಲ್ಲಾದರೂ ಈ ಪದ್ಧತಿಯನ್ನು ಸರಿಯಾಗಿ ಅಭ್ಯಸಿಸಿ , ಹೇಳಿಕೊಡುತ್ತಿದ್ದರೇನೋ ಎಂದು ತಮ್ಮ ಹುಡುಕಾಟ ಮುಂದುವರೆಸಿದರು.


ತಮ್ಮ ಹುಡುಕಾಟದ ಮುಂದುವರೆದ ಭಾಗವಾಗಿ ದಕ್ಷಿಣ ಆಫ್ರಿಕಾ ದೇಶಕ್ಕೆ ಹೋಗಿ ಅಲ್ಲಿನ Johanesberg ನಗರದಲ್ಲಿ ಕೆಲವು ತಿಂಗಳು ಕಾಲ ಕಳೆದು ಹಲವು ಗ್ರಂಥಾಲಯಗಳನ್ನು ಹುಡುಕಿ, ಕೆಲ ವೈದ್ಯರನ್ನು ಸಹ ಸಂದರ್ಶಿಸಿದರು. ಆದರೂ ಅಲ್ಲಿ ಸಮರ್ಪಕವಾಗಿ ಹೋಮಿಯೋಪತಿ ಪದ್ಧತಿಯನ್ನು ಅನುಸರಿಸಿದ್ದನ್ನು ಎಲ್ಲಿಯೂ ಕಾಣದೆ ತಮ್ಮ ದೇಶಕ್ಕೆ ವಾಪಾಸ್ ಮರುಳಿದರು .


ಭಗವಂತನ ಕೃಪೆಯೇ ಎಂಬಂತೆ ಆಧ್ಯಾತ್ಮಿಕತೆ ಮತ್ತು ಜ್ಞಾನದ ತವರೆಂದೇ ಬಣ್ಣಿಸಲಾಗಿರೋ ಭಾರತ ದೇಶ ಇವರನ್ನು ತನ್ನತ್ತ ಸೆಳೆಯಿತು. ಭಾರತ ಅಂದಿನಿಂದಲೂ ಪ್ರಪಂಚದಲ್ಲೇ ಅತೀ ಹೆಚ್ಚು ಹೋಮಿಯೋಪತಿ ವೈದ್ಯರನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ . ಆ ಕಾರಣದಿಂದ ತಮ್ಮ ಹುಡುಕಾಟಕ್ಕೆ ಸಮರ್ಪಕವಾದ ಉತ್ತರ ಭಾರತಲ್ಲಿ ಸಿಗಬಹುದೆನ್ನುವ ಆಶಾಭಾವನೆಯೊಂದಿಗೆ ಭಾರತಕ್ಕೆ ಬಂದರು. ಮೊದಲು ಮುಂಬೈ ನಗರದ ಕೆಲವು ವೈದ್ಯರ ಬಳಿ ಅಭ್ಯಸಿಸಿ, ಅಧ್ಯನ ಮಾಡಿದರು. ಕೆಲ ತಿಂಗಳುಗಳು ಮುಂಬೈನಲ್ಲಿ ಇದ್ದು ಒಬ್ಬರ ಸೂಚನೆಯ ಮೇರೆಗೆ ‘ಭಾರತದ ಹೋಮಿಯೋಪತಿ ಮೆಕ್ಕಾ’ ಎಂದೇ ಹೆಸರುವಾಸಿಯಾಗಿರುವ ಕೊಲ್ಕತ್ತಾ ನಗರಕ್ಕೆ ತೆರಳಿದರು. ಅಲ್ಲಿನ ‘ಪಶ್ಚಿಮ ಬಂಗಾಳ ವೈದ್ಯಕೀಯ ಮಹಾವಿದ್ಯಾಲಯ’ದಲ್ಲಿ ಅಧ್ಯಯನ ಶುರು ಮಾಡಿದರು . ಹೊರದೇಶದಿಂದ ಒಬ್ಬ ವ್ಯಕ್ತಿ, ಅದೂ ಯುರೋಪ್ ನಿಂದ ಹೋಮಿಯೋಪತಿ ಕಲಿಯಲು ಆಸಕ್ತಿ ತೋರಿದ್ದರಿಂದ ಅಲ್ಲಿದ್ದ ಹಲವು ವೈದ್ಯರು ಇವರಿಗೆ ಸಹಕಾರಿಯಾದರು . ಅಲ್ಲಿ ಉಪನ್ಯಾಸಕರಾಗಿದ್ದ ಮತ್ತು ಹೋಮಿಯೋಪತಿ ಕ್ಷೇತ್ರದ ದಿಗ್ಗಜ ಡಾ.ಕೆಂಟ್ ರವರ ನೇರ ಶಿಷ್ಯರಾದ ಡಾ.ಬಿ.ಕೆ. ಬೋಸ್ ರವರು ಇವರ ವಿಶಿಷ್ಟ ಆಸಕ್ತಿಯನ್ನು ಕಂಡು ಔಷಧಿಗಳ ಮತ್ತು ವಿಧಾನಗಳ ವಿಷಯಗಳಲ್ಲಿ ಆಳವಾದ ಅಧ್ಯಯನ ಮಾಡುವತ್ತ ಮಾರ್ಗದರ್ಶನ ನೀಡಿದರು .

ಅಲ್ಲಿ ಅಭ್ಯಾಸ ಮಾಡುತ್ತಲೇ ಇವರು ಅನೇಕ ಅಧ್ಯಾತ್ಮ ಗುರುಗಳನ್ನು , ದಾರ್ಶನಿಕರನ್ನು ಕಂಡು, ಭೇಟಿ ಮಾಡಿ ಭಾರತದ ತತ್ವಗಳ, ಆತ್ಮಸಂಶೋಧನೆಯ ಅಧ್ಯಯನಗಳ ಕುರಿತಾಗಿ ಆಳವಾಗಿ ತಿಳಿದುಕೊಂಡರು. ತಮ್ಮಲ್ಲಿ ಬಾಲ್ಯದಲ್ಲಿ ಉದ್ಭವಿಸಿದ್ದ ಪ್ರಶ್ನೆಗಳ ಕುರಿತಾಗಿ ಹಲವು ಜ್ಞಾನಿಗಳೊಡನೆ ಸಮಾಲೋಚನೆ ನಡೆಸಿ ಅದಕ್ಕೆ ಅಧ್ಯಾತ್ಮರೂಪದ ಉತ್ತರಗಳನ್ನು ಪಡೆದರು. ಹೋಮಿಯೋಪತಿ ಅಭ್ಯಾಸ ಮತ್ತು ಸಜ್ಜನರ ಜೊತೆಗಿನ ಸಹವಾಸದ ಮೂಲಕ ಹೋಮಿಯೋಪತಿ ಪದ್ಧತಿಯಲ್ಲಿ ಬರುವ ‘Vital Force’ - ಜೀವನ ಮೂಲತತ್ವ ವನ್ನು ಅತ್ಯಂತ ಆಳವಾಗಿ ಅರಿತುಕೊಂಡು ಸಾಕ್ಷಾತ್ಕರಿಸಿಕೊಂಡರು.

ಕೆಲವು ತಿಂಗಳುಗಳ ಅಧ್ಯಯನದ ನಂತರ ಇವರು ಭಾರತದಲ್ಲಿಯೂ ಹೋಮಿಯೋಪತಿ ಅಭ್ಯಾಸದಲ್ಲಿರೋ ನೂನ್ಯತೆಯನ್ನು ಗಮನಿಸಿದರು . ಕೆಲವೇ ಕೆಲವು ವೈದ್ಯರು ಮೂಲತತ್ವಗಳಿಗೆ ಅಂಟಿಕೊಂಡು ಜನರನ್ನು ಅವುಗಳ ಆಧಾರವಾಗಿ ಚಿಕಿತ್ಸಿಸುತ್ತದ್ದರೇ ಹೊರತು ಹಲವು ವೈದ್ಯರು ಹೋಮಿಯೋಪತಿಯ ಮೂಲತತ್ವಗಳಿಂದ ವಿಮುಖರಾಗಿ ತಮ್ಮದೇ ದಾರಿಯನ್ನು ಹಿಡಿದಿದ್ದರು . ಇಂತಹ ವೈದ್ಯರ ಸಂಖ್ಯೆಯೇ ಬಹುಪಾಲಾಗಿದ್ದರಿಂದ ಹೋಮಿಯೋಪತಿಯ ಮೂಲತತ್ವಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದ್ದವು .

ಯಾವುದೇ ಪದ್ಧತಿಯೇ ಆಗಲಿ, ಅದರ ಮೂಲತತ್ವಗಳ ಆಧಾರಗಳನ್ನು ಕಳೆದುಕೊಂಡು ಬೆಳೆದರೆ ಅದರ ವಿನಾಶ ಸನ್ನಿಹಿತವಾದದ್ದು . ಇದರ ಅಪಾಯವನ್ನು ಗಮನಿಸಿದ ಇವರು ಹೋಮಿಯೋಪತಿ ಪದ್ಧತಿಗೆ ತನ್ನ ನಿಜವಾದ ಮೂಲ ರೂಪಕ್ಕೆ ಮರಳಲು ದೊಡ್ಡ ಕ್ರಾಂತಿಯ ಅಗತ್ಯ ಇರುವುದನ್ನು ತಿಳಿದು ಆ ಕ್ರಾಂತಿಯತ್ತ ಏಕಾಂಗಿಯಾಗಿ ಹೆಜ್ಜೆ ಇಡಲು ನಿರ್ಧರಿಸಿ ತಮ್ಮ ಜ್ಞಾನದ ಬುಟ್ಟಿಯನ್ನು ಕಟ್ಟಿಕೊಂಡು ಜೊತೆಗೆ ಹೋಮಿಯೋಪತಿ ಡಿಪ್ಲೋಮ ಪದವಿಯ ಸಮೇತ ತಮ್ಮ ತವರಾದ ಗ್ರೀಸ್ ಗೆ ಮರಳಿದರು .


ತಾವು ಭೇಟಿ ಮಾಡಿದ್ದ ವೈದ್ಯರಲ್ಲಿ ವೈದ್ಯಕೀಯ ಮೂಲ ವಿಷಯಗಳ ತಿಳುವಳಿಕೆ ಅಷ್ಟು ಪ್ರಭಲವಾಗಿಲ್ಲದಿದ್ದನ್ನು ಗಮನಿಸಿದರು . ಹೋಮಿಯೋಪತಿ ವಿಷಯಗಳ ಜೊತೆಗೆ ಅಂಗರಚನಾಶಾಸ್ತ್ರ, ಜೀವರಸಾಯನ ಶಾಸ್ತ್ರ, ಕಾಯಿಲೆಗಳ ಬಗೆಗಿನ ಸಮಗ್ರ ತಿಳುವಳಿಕೆ ; ಇವೆಲ್ಲದರ ತಿಳುವಳಿಕೆಯಿಂದ ಇನ್ನೂ ಹೆಚ್ಚು ಸಮರ್ಪಕವಾಗಿ ಹೋಮಿಯೋಪತಿ ಚಿಕಿತ್ಸೆಯನ್ನು ನೀಡಬಹುದು ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಹೋಮಿಯೋಪತಿಯನ್ನು ನೆಲೆಗೊಳಿಸಬಹುದು ಎಂದು ಅರಿತವರು ತಮ್ಮ ದೇಶದಲ್ಲೇ ಹಲವು ತಜ್ಞ ವೈದ್ಯರ ಸಹಭಾಗಿತ್ವದಲ್ಲಿ ಹೋಮಿಯೋಪತಿ ಯನ್ನು ಸ್ವತಂತ್ರವಾಗಿ ಅಭ್ಯಸಿಸಲು ಪ್ರಾರಂಭಿಸಿದರು . ಕ್ಷಿಪ್ರವಾಗಿರುವ ಜ್ಞಾನ ಮತ್ತು ಆತ್ಮಶುದ್ಧಿಯ ಫಲವಾಗಿ ಇವರು ನೀಡಿದ ಚಿಕಿತ್ಸೆಯಿಂದ ಹಲವಾರು ಜನರ ಗಂಭೀರ ಖಾಯಿಲೆಗಯೂ ವಾಸಿಯಾದವು. ಕೇವಲ ಒಂದೆರಡೇ ವರ್ಷಗಳಲ್ಲಿ ಇವರ ಖ್ಯಾತಿ ಇಡೀ ಗ್ರೀಸ್ ದೇಶಾದ್ಯಂತ ಮತ್ತು ನೆರೆಯ ರಾಷ್ಟ್ರಗಳಿಗೂ ಹಬ್ಬಿತು . ತಾವೇ ಅಥೆನ್ಸ್ ನಗರದಲ್ಲಿ ಹೋಮಿಯೋಪತಿ ಕೇಂದ್ರವನ್ನು ತೆರೆದು ಕೆಲವು ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾ ತಮ್ಮ ಸೇವೆಯ ವ್ಯಾಪ್ತಿಯನ್ನು ಹೆಚ್ಚಿಸಿದರು.


ತಮ್ಮ ವೈದ್ಯಕೀಯ ಅಭ್ಯಾಸ ಔನ್ಯತ್ಯದಲ್ಲಿರುವಾಗಲೇ ಅವರಿಗೆ ಸ್ವಿಟ್ಜರ್ಲ್ಯಾಂಡ್ ದೇಶದಿಂದ ಕರೆ ಬಂದಿತ್ತು. ಭಾರತದ ಹೆಸರಾಂತ ದಾರ್ಶನಿಕ ಹಾಗು ತತ್ವಶಾಸ್ತ್ರಜ್ಞರಾದಂತಹ ಜಿಡ್ಡು ಕೃಷ್ಣಮೂರ್ತಿ ಯವರು ತಮ್ಮನ್ನು ಆಹ್ವಾನಿಸಿದ್ದಾರೆ, ಬರಬೇಕು ಎಂದು. ಇವರು ಸ್ವಿಟ್ಜರ್ಲ್ಯಾಂಡ್ ಗೆ ತೆರಳಿದರು . ಅಲ್ಲಿ ಇವರನ್ನು ಭೇಟಿ ಮಾಡಿದ ಕೃಷ್ಣಮೂರ್ತಿ , ಅವರ ಶಿಷ್ಯರು, ಸಹವರ್ತಿಗಳು ಇವರನ್ನು ಉದ್ದೇಶಿಸಿ ‘ತಮ್ಮ ಬಗ್ಗೆ ನಾವು ಕೇಳಿದ್ದೇವೆ, ಅತ್ಯುತ್ತಮ ವೈದ್ಯರೆಂದು . ತಮಗೆ ಅದ್ಭುತವಾದ ಅಂತರ್ದೃಷ್ಟಿ (Intuition) ಇದೆ ಆದ್ದರಿಂದಲೇ ತಾವು ಇಷ್ಟೆಲ್ಲಾ ಸಾಧನೆ ಮಾಡಲಾಗಿರುವುದು ಎಂದು’ ಅಂತ ಹೇಳಿದಾಗ ಇವರು ‘ಅದು ಅಂತರ್ದೃಷ್ಟಿ ಮಾತಲ್ಲ. ನನಗೆ ವಿಷಯಗಳ ಬಗ್ಗೆ, ತಿಳುವಳಿಕೆ ಇದೆ, ನಾನು ತುಂಬಾ ಕಷ್ಟಪಟ್ಟು ಜ್ಞಾನಾರ್ಜನೆ ಮಾಡಿಕೊಂಡಿದ್ದೇನೆ, ಹಲವು ಪುಸ್ತಕಗಳ ಅಧ್ಯಯನದ ಫಲ ಇದು’ ಎಂಬ ನೆರವಾದ ಉತ್ತರ ನೀಡಿದರು.

‘ಕೇವಲ ಅಂತರ್ದೃಷ್ಟಿಯಿಂದ ಎಲ್ಲವೂ ಸಾಧ್ಯವಾಗುವುದಿಲ್ಲ . ಹಾಗಾಗಿದ್ದರೆ ಎಲ್ಲರೂ, ಎಲ್ಲರ ಕಾಯಿಲೆಗಳು ವಾಸಿಯಾಗಬೇಕಿತ್ತು . ಅಂತರ್ದೃಷ್ಟಿ (intuition) ಮಾತುಗಳು, ಚರ್ಚೆಗಳಿಗೆ , ತಾತ್ವಿಕ ಮಾತುಕತೆಗಳಿಗೆ ಸೀಮಿತ ಮಾತ್ರ. ನಿಜವಾದ ಫಲಿತಾಂಶ ಸಿಗಬೇಕಾದರೆ ಜ್ಞಾನ ಅತ್ಯಂತ ಅಗತ್ಯವಾದುದು ಎಂದು ಹೇಳಿ. ಹೋಮಿಯೋಪತಿ ಅನ್ನೋದು ಅಂತರ್ದೃಷ್ಟಿ (Intuitive) ಪದ್ಧತಿ ಅನ್ನೋ ನಂಬಿಕೆಗೆ ತೆರೆ ಎಳೆದರು.


ಒಮ್ಮೆ ಕೃಷ್ಣಮೂರ್ತಿ ಯವರು ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಾಗ ಬೇರೆ ವೈದ್ಯರು ಇವರು ಬದುಕೋ ಸಾಧ್ಯತೆ ಬಹಳ ಕಡಿಮೆ ಅಂತ ಹೇಳಿದ್ದರು. ಆಗ ಕೃಷ್ಣಮೂರ್ತಿ ಯವರು ಇವರನ್ನು ಕರೆದು "ನೀವು ಏನಾದರೂ ಮಾಡಬೇಕು" ಎಂದು ಕೇಳಿಕೊಂಡಾಗ ಇವರು ಕೃಷ್ಣಮೂರ್ತಿ ಯವರ ರೋಗಲಕ್ಷಣಗಳನ್ನು ಪರೀಕ್ಷಿಸಿ ಔಷದಿ ನೀಡಿದರು . ಆದರೂ ಕೃಷ್ಣಮೂರ್ತಿಯವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ . ನಿತ್ರಾಣ ಹೊಂದಿ ಏಳಲೂ ಆಗದ ಸ್ಥಿತಿಯಲ್ಲಿ ನಲುಗಿದರು. ಮತ್ತೆ ಇವರನ್ನು ಕರೆದು ಕೇಳಿದಾಗ. "ನನ್ನ ತಿಳುವಳಿಕೆಗೆ ತಕ್ಕ ಔಷದಿಗಳನ್ನೆಲ್ಲ ನೀಡಿದ್ದೇನೆ , ಇನ್ನೂ ಅಲೋಪತಿ ವೈದ್ಯರನ್ನು ಕರೆದು ಆಂಟಿಬಯೋಟಿಕ್ ಔಷದಿ ಕೊಡಿಸಿ ಅಂದಾಗ ಕೃಷ್ಣಮೂರ್ತಿಯವರು ' ಬೇಡ, ನೀವೇ ಪ್ರಯತ್ನಿಸಿ , ಹೋಮಿಯೋಪಥಿ ಔಷದಿ ನೀಡಿ ' ಎಂದು ಕೇಳಿಕೊಂಡರು. ಆ ರಾತ್ರಿಯೆಲ್ಲಾ ಎಚ್ಚರವಿದ್ದು ಆಲೋಚಿಸಿ ಇವರು "Phosphorus" ಎನ್ನುವ ಔಷಧಿಯನ್ನು ನೀಡಿದರು. ಔಷದಿ ತಗೆದುಕೊಂಡು ಒಂದೇ ದಿನದಲ್ಲಿ ಕೃಷ್ಣಮೂರ್ತಿಯವರ ಆರೋಗ್ಯ ಸುಧಾರಿಸಿತು. ಅವರ ಚೈತನ್ಯ ಇಮ್ಮಡಿಯಾಯಿತು. ಇನ್ನೇನು ಬದುಕುಳಿಯುವ ಸಾಧ್ಯತೆಗಳು ಬಹಳ ಕಡಿಮೆ ಅಂತ ಎಲ್ಲರೂ ಹೇಳಿದ್ದರೂ ಹೋಮಿಯೋಪಥಿ ಸಹಾಯದಿಂದ ಇನ್ನೂ ಇಪ್ಪತ್ತು ವರ್ಷ ಹೆಚ್ಚು ಬದುಕಿದ್ದರು.


ಅಷ್ಟು ಹೊತ್ತಿಗಾಗಲೇ ಈ ಯುವ ವೈದ್ಯರ ಕೀರ್ತಿ ಇಡೀ ಯುರೋಪ್ ಗೆ ಹಬ್ಬಿ ದೂರದ ಅಮೆರಿಕ ದೇಶದಿಂದ ಇವರನ್ನು ವಿಶ್ವವಿದ್ಯಾಲಯಗಳು ಆಹ್ವಾನ ನೀಡಿ ಉಪನ್ಯಾಸಗಳನ್ನು ನೀಡಲು ಅವಕಾಶ ಮಾಡಿಕೊಟ್ಟವು. ಇಡೀ ಪ್ರಪಂಚದ ಹಲವು ಪ್ರಖ್ಯಾತ ವೈದ್ಯರು , ಸರ್ಜನ್ ಗಳು ಇವರ ಉಪಸ್ಥಿತಿಯಲ್ಲಿ ಹೋಮಿಯೋಪಥಿ ಕಲಿಯಬೇಕೆಂದು ಅರಿಕೆ ಮಾಡಿಕೊಂಡರು. ಪ್ರಪಂಚದ ಮೂಲೆ ಮೂಲೆಗಳಿಂದ ವೈದ್ಯರು ಕಲಿಯಬೇಕೆಂದು ಆಶಿಸಿದಾಗ ಅವರನ್ನೆಲ್ಲ ಒಂದೇ ಸೂರಿನಡಿಯಲ್ಲಿ ಸೇರಿಸಿ ಪಾಠ ಮಾಡುವ ಉಪಾಯ ಪ್ರತೀ ದೇಶಕ್ಕೆ ಹೋಗಿ ಪುಟ್ಟ ಉಪನ್ಯಾಸಗಳನ್ನು ನೀಡುವುದಕ್ಕಿಂತ ಸಮಂಜಸ ಅನ್ನಿಸಿ ತಮ್ಮೆಲ್ಲ ಶಕ್ತಿಯನ್ನು ಸೇರಿಸಿ ಗ್ರೀಸ್ ದೇಶದಲ್ಲಿನ ಅಲ್ಲೋನಿಸೋಸ್ ಎಂಬ ಪುಟ್ಟ ದ್ವೀಪದಲ್ಲಿ 'International academy of Classical Homeopathy ' ಸಂಸ್ಥೆಯನ್ನು ಸ್ಥಾಪಿಸಿದರು .

ಹೋಮಿಯೋಪಥಿ ಪ್ರಪಂಚದಲ್ಲಿ ಮೊದಲ ಬಾರಿಗೆ ಇಡೀ ಪ್ರಪಂಚದ ವೈದ್ಯರು ಬಂದು ಒಂದೇ ಸೂರಿನಡಿಯಲ್ಲಿ ಕಲಿಯಬಹುದಾದಂತಹ ಸಂಸ್ಥೆಯೊಂದು ತಲೆ ಎತ್ತಿ ನಿಂತಿತು.


ಇಷ್ಟು ಹೊತ್ತು ನಾನು ಬರೆದಿರುವ ಮಹಾನ್ ವ್ಯಕ್ತಿಯ ಹೆಸರು "ಜಾರ್ಜ್ ವಿಥಾಲ್ಕಸ್ " (George Vithoulkas) . ಇಡೀ ಹೋಮಿಯೋಪತಿ ಪ್ರಪಂಚ ಇವರನ್ನು ' ಪ್ರೊಫೆಸರ್ ' ಎಂದೇ ಸಂಭೋಧಿಸುತ್ತದೆ.

ಗ್ರೀಸ್ ದೇಶದಲ್ಲಿ ಹುಟ್ಟಿ, ಜರ್ಮನಿ ದೇಶದಲ್ಲಿ ಜನಿಸಿದ ಹೋಮಿಯೋಪತಿ ಅನ್ನುವ ದಿವ್ಯ ವೈದ್ಯಪದ್ಧತಿಯನ್ನು ಇಡೀ ಜಗತ್ತಿಗೆ ಪಸರಿಸಿದ ಮಹಾಗುರು .


ವೃತ್ತಿಪರ ಕಟ್ಟಡ ವಾಸ್ತುಶಿಲ್ಪ ತಜ್ಞರಾದರೂ ಮನುಕುಲದ ಏಳಿಗೆಗಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ವೈದ್ಯರಾಗಿ ಮನುಷ್ಯನನ್ನು ಅತ್ಯಂತ ಆಳದಲ್ಲಿ ಕಾಡಿ ಕೊರಗುವಂತೆ ಮಾಡುವ ಅತ್ಯಂತ ಭೀಕರ ಮಹಾರೋಗಗಳನ್ನು ತಮ್ಮ ಜ್ಞಾನದಿಂದ ಹೋಮಿಯೋಪತಿ ಔಷಧಿಗಳ ಮೂಲಕ ವಾಸಿ ಮಾಡಿದ್ದಾರೆ. ಪ್ರತೀ ವರ್ಷ ಇಡೀ ಪ್ರಪಂಚದ ಮೂಲೆಮೂಲೆಗಳಿಂದ , ಸಾವಿರಾರು ಕಿಲೋಮೀಟರು ಹಾದಿ ಕ್ರಮಿಸಿ ಎಲ್ಲ ಕಡೆಯಿಂದ ಡಾಕ್ಟರ್ಗಳು , ತಜ್ಞರು, ಸರ್ಜನ್ ಗಳು ಬಂದು ಅವರ ಕೇಂದ್ರದಲ್ಲಿ ಹೋಮಿಯೋಪತಿ ಬಗ್ಗೆ , ಅದರ ಚಿಕಿತ್ಸೆಯ ವಿಧಾನಗಳ ಬಗ್ಗೆ ಕಲಿತುಕೊಂಡು ಹೋಗುತ್ತಾರೆ. ಅವರ ಬಳಿ ಕಲಿತಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ದೇಶಗಳಿಗೆ ಹೋಗಿ ಹೋಮಿಯೋಪತಿ ಔಷಧಿಗಳಿಂದ ಹಲವು ಗಂಭೀರ, ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸಿ ಪ್ರಖ್ಯಾತಿ ಹೊಂದಿದ್ದಾರೆ.


ಪ್ರೊ.ವಿಥಾಲ್ಕಸ್ ಅವರ ಸೇವೆಯನ್ನು ಗುರುತಿಸಿ ಹಲವು ವಿಶ್ವವಿದ್ಯಾಲಯಗಳು ಗೌರವಾನ್ವಿತ ಡಾಕ್ಟರೇಟ್ ನೀಡಿ ಪುರಸ್ಕರಿಸಿವೆ. ಅವರು ಬರೆದಿರುವ ‘Science of Homeopathy’ ಮತ್ತು ‘Levels of Health’ ಮುಂತಾದ ಹತ್ತಾರು ಪುಸ್ತಕಗಳು ಹೋಮಿಯೋಪತಿ ಮತ್ತು ವೈದ್ಯಕೀಯ ವಿಜ್ಞಾನದ ಕ್ಷೇತ್ರದಲ್ಲಿ ಉನ್ನತ ಮನ್ನಣೆ ಪಡೆದಿವೆ . ಈ ಪುಸ್ತಕಗಳನ್ನು ಕೊಂಡು ಓದಿ ಅದರಲ್ಲಿರುವ ತತ್ವಗಳನ್ನು, ಸೂಚನೆಗಳನ್ನು ಅಳವಡಿಸಿಕೊಂಡು ಹಲವಾರು ವೈದ್ಯರು ತಮ್ಮ ವೃತ್ತಿಯಲ್ಲಿ ಯಶಸ್ಸು ಗಳಿಸಿದ್ದಾರೆ . ರಷ್ಯಾ , ರೊಮೇನಿಯಾ , ಉಕ್ರೇನ್ , ಜರ್ಮನಿ, ಬ್ರಿಟನ್ ದೇಶದ ವಿಶ್ವವಿದ್ಯಾಲಯಗಳು ಪ್ರೊ.ವಿಥಲ್ಕಸ್ ಅವರನ್ನು ಗೌರವಾನ್ವಿತ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಂಡು ಗೌರವಿಸಿವೆ.


ತಮ್ಮ ವೈದ್ಯಕೀಯ ಸೇವೆಯಿಂದ ಲಕ್ಷಾಂತರ ರೋಗಿಗಳನ್ನು ಗುಣಪಡಿಸಿ, ನೊಂದವರ ಬಾಳಿಗೆ ಬೆಳಕಾಗಿ, ಹಲವು ಜ್ಞಾನದಾಹಿಗಳ ಪಾಲಿಗೆ ಮಹಾಗುರುವಾಗಿ ತಮ್ಮ ಇಡೀ ಜೀವನವನ್ನು ಹೋಮಿಯೋಪತಿ ಗೆ ಮೀಸಲಿಟ್ಟ ಸೇವೆಯನ್ನು ಗುರುತಿಸಿ ಪ್ರಪಂಚದ ಅತ್ಯಂತ ಉನ್ನತ ನಾಗರಿಕ ಪ್ರಶಸ್ತಿಯಾದ ‘Right Livelihood Award’ ಅನ್ನು ಸ್ವೀಡನ್ ಸರ್ಕಾರ ೧೯೯೬ ರಲ್ಲಿ ನೀಡಿ ಗೌರವಿಸಿದೆ.


ಡಾ.ಕೆಂಟ್ ರವರು ೧೯೧೬ ರಲ್ಲಿ ಮರಣ ಹೊಂದಿದ ನಂತರ, ಹೋಮಿಯೋಪತಿ ಎಂಬ ಹಡುಗನ್ನು ನಡೆಸುವ ಸಮರ್ಪಕ ನಾವಿಕನಿಲ್ಲದಂತೆ ಆಯಿತು. ಸಾವಿರಾರು ಹೋಮಿಯೋಪತಿ ವೈದ್ಯರಿದ್ದರೂ , ಹೋಮಿಯೋಪತಿಯ ಮೂಲ ಸೂಕ್ತಿಗಳನ್ನೇ ಪ್ರಯೋಗಿಸಿ , ಶಾಸ್ತ್ರೀಯವಾಗಿ, ನಿಯಮಗಳನ್ನು ಮೀರದಂತೆ ಈ ಪದ್ಧತಿಯನ್ನು ಅನುಸರಿಸುವವರ ಸಂಖ್ಯೆ ಕ್ಷೀಣಿಸಿತ್ತು . ಆ ಮುಳುಗುತ್ತಿರುವ ಹಡುಗನ್ನು ಪ್ರೊ.ವಿಥಾಲ್ಕಸ್ ತಮ್ಮೆಲ್ಲ ಶಕ್ತಿಯಿಂದ ಮೇಲಕ್ಕೆತ್ತಿ , ಡಾ.ಹನ್ನೆಮನ್ ರವರು ಹಾಕಿಕೊಟ್ಟ ಸೂಕ್ತಿಗಳ ಸರಿಯಾದ ಪ್ರಯೋಗವನ್ನು ಇಡೀ ಪ್ರಪಂಚದ ವೈದ್ಯರಿಗೆ ತಿಳಿಹೇಳಿ, ಮಾರ್ಗದರ್ಶಿಸುತ್ತಿದ್ದಾರೆ. ಹೋಮಿಯೋಪತಿ ಹೆಸರಿನಲ್ಲಿ ತಮ್ಮದೇ ತಲೆಹರಟೆ ವಿಧಾನಗಳನ್ನು ಬಳಸಿ ಜನರ ದಾರಿ ತಪ್ಪಿಸಿ, ಮೋಸ ಮಾಡುವವರನ್ನು ನೇರವಾಗಿ ಧಿಕ್ಕರಿಸಿ ಅವರಿಗೂ ಸರಿಯಾದ ಹೋಮಿಯೋಪತಿ ವಿಧಾನಗಳ ಬಗ್ಗೆ ತಿಳಿಹೇಳುತ್ತಾರೆ.


ಹೋಮಿಯೋಪತಿ ಅನ್ನು ನಂಬಿಕೆಯ ಔಷದಿ (Placebo effect) ಎಂದು ಗೇಲಿ ಮಾಡುವ ಹಲವು ಉದ್ಯಮಿಗಳು, ಅಲೋಪತಿ ವೈದ್ಯರುಗಳನ್ನು ನೇರವಾಗಿ ಭೇಟಿ ಮಾಡಿ ತಮ್ಮ ಚಿಕಿತ್ಸೆ ಮತ್ತದರ ಫಲಿತಾಂಶಗಳನ್ನು ತೋರಿಸಿ ಅವರನ್ನು ನಿಬ್ಬೆರಗಾಗುವಂತೆ ಮಾಡಿ ಹೋಮಿಯೋಪತಿ ಪದ್ಧತಿಯ ವೈಜ್ಞಾನಿಕತೆಯನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತಿದ್ದಾರೆ.


ವೈಜ್ಞಾನಿಕ ಜಗತ್ತಿನಲ್ಲಿ ಹೋಮಿಯೋಪತಿ ಗೆ ಮನ್ನಣೆ ದೊರಕಬೇಕೆಂದು ಮೊದಲ ಬಾರಿ ತಾವು ಚಿಕಿತ್ಸೆ ನೀಡಿರುವ ವಿಧಾನವನ್ನು ವಿಜ್ಞಾನಿಕ ಧೃಢೀಕರಣಗಳಿಗೆ ಒಳಪಡಿಸಿ ಅವುಗಳ ಫಲಿತಾಂಶವನ್ನು ದೇಶವಿದೇಶದ ವಿಜ್ಞಾನಿಗಳಿಂದ ಪರೀಕ್ಷಿಸಲು ಸೂಚಿಸಿ , ಹೋಮಿಯೋಪತಿ ಚಿಕಿತ್ಸೆಗಳ ವೈಜ್ಞಾನಿಕ ಪರಿಪೂರ್ಣತೆಯನ್ನು ಪ್ರಪಂಚದ ಹಲವಾರು Peer Reviewed Journal ಗಳಲ್ಲಿನ ಲೇಖನಗಳ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಶಿಷ್ಯರು ಚಿಕಿತ್ಸೆ ನೀಡಿರುವ ಭೀಕರ ರೋಗಗಳಾದ , ಅಲೋಪತಿ ಪದ್ಧತಿಯಲ್ಲಿ ಚಿಕಿತ್ಸೆಯೇ ಇಲ್ಲದ ಖಾಯಿಲೆಗಳಾದಂತಹ ಸೋರಿಯಾಸಿಸ್ , ಗ್ಯಾಂಗ್ರೀನ್ , ತೊನ್ನು ಮುಂತಾದ ಕಾಯಿಲೆಗಳ ಚಿಕಿತ್ಸೆ-ಫಲಿತಾಂಶಗಳನ್ನು ಸಹ ಅಂತಾರಾಷ್ಟ್ರೀಯ Journal ಗಳಲ್ಲಿ ಪ್ರಕಟಿಸಿ ಪ್ರಪಂಚದ ವೈಜ್ಞಾನಿಕ ಜಗತ್ತಿನಲ್ಲೆಲ್ಲ ಹೋಮಿಯೋಪತಿ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಿದ್ದಾರೆ.


ಪ್ರತಿ ವರ್ಷ ಪ್ರಪಂಚದ ಎಲ್ಲ ಕಡೆಗಳಿಂದ ಅವರ ಬಳಿ ಚಿಕಿತ್ಸೆ ಪಡಿಯಲು ಜನ ತಿಂಗಳುಗಟ್ಟಲೆ ಕಾದು ಹೋಗಿ ಬರುತ್ತಾರೆ. ಅದರಲ್ಲಿ ಹಲವಾರು ದೇಶಗಳ ಪ್ರಧಾನ ಮಂತ್ರಿಗಳು, ರಾಜಕಾರಣಿಗಳು, ಸಂಗೀತಗಾರರು , ಮುತ್ಸದ್ದಿ ನಾಯಕರೂ ಇದ್ದಾರೆ. ತಮ್ಮಲ್ಲಿ ಚಿಕಿತ್ಸೆ ಪಡೆಯಲು ಬರುವ ಜನರಲ್ಲಿ ಯಾವ ಮೇಲು ಕೀಳು ಭಾವನೆಯಿಲ್ಲದೆ ಎಲ್ಲರಿಗೂ ಸಮಾನ ಮನೋಭಾವದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.


ತಮ್ಮ ಪ್ರಶ್ನೆಗಳನ್ನು, ಉಯಿಲುಗಳನ್ನು ಬರೆದು ಮೇಲ್ ಮಾಡುವ ದೇಶವಿದೇಶದ ವಿದ್ಯಾರ್ಥಿಗಳಿಗೆ ಈಗಿನ ಇಳಿವಯಸ್ಸಿನಲ್ಲೂ ಉತ್ತರಿಸಿ ಮೇಲ್ ಬರೆಯುತ್ತಾರೆ. ‘ನಾನು ನನ್ನ ವಿದ್ಯಾರ್ಥಿ ಮತ್ತು ವೃತ್ತಿಜೀವನದ ಮೊದಲು ಹನ್ನೆರಡು ವರ್ಷ ಪ್ರತಿದಿನ ಹನ್ನೆರಡು ಗಂಟೆ ಓದುತ್ತಿದ್ದೆ , ಕಲಿಯುವ ವಿದ್ಯೆಗೆ ಅಷ್ಟು ಜೀವನವನ್ನು ಮುಡಿಪಾಗಿಟ್ಟರೆ ಮಾತ್ರ ವಿದ್ಯೆ ಮತ್ತು ಜ್ಞಾನ ಲಭಿಸುತ್ತದೆ’ ಎಂದು ಸಂದರ್ಶನಗಳಲ್ಲಿ ಮಾರ್ಗದರ್ಶನ ಮಾಡುತ್ತಾರೆ . ‘ನನ್ನ ವಿದ್ಯಾರ್ಥಿಗಳೆಲ್ಲ ಕಲಿತು , ನನಗಿಂತ ಉತ್ತಮ ವೈದ್ಯರಾಗಬೇಕು , ಇದೇ ನನ್ನ ಆಸೆ’ ಎಂದು ತಮ್ಮ ಪ್ರತೀ ಸಂದರ್ಶನ , ತರಗತಿಗಳಲ್ಲೂ ಹೇಳಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ತಮ್ಮ ಮನೋದಾರತೆಯನ್ನು ಮೆರೆದಿದ್ದಾರೆ .


ಪ್ರಪಂಚದಾದ್ಯಂತ ತಮ್ಮನ್ನು ಸಂದರ್ಶಿಸುವ ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ, ವೈದ್ಯರುಗಳಿಗೆ ನಗುಮುಖದಲ್ಲಿ ಮಾತಾಡುತ್ತ ತಮ್ಮ ಉದ್ದೇಶದ ಪರಿಚಯ ಮಾಡಿಕೊಡುತ್ತಿದ್ದಾರೆ. ಸಂದಿರುವ ಮನ್ನಣೆ ಗೌರವ ವನ್ನು ತಲೆ ಬಾಗಿ ಪುರಸ್ಕರಿಸಿ, ತಾವಾಗಿಯೇ ಯಾವ ಮನ್ನಣೆಯನ್ನು ಬಯಸದೆ ಹೋಮಿಯೋಪತಿ ಪದ್ಧತಿಯನ್ನು ಜಗತ್ತಿನೆಲ್ಲೆಡೆ ಪಸರಿಸಿ ಮನುಕುಲಕ್ಕೆ ಉಪಕಾರ ಮಾಡುವತ್ತ ಮಾತ್ರ ತಮ್ಮ ಅಂತರ್ದೃಷ್ಟಿ ನ್ನು ಕೇಂದ್ರೀಕರಿಸಿ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಪುಟ್ಟ ದ್ವೀಪದ ದಡದಲ್ಲಿ ತಮ್ಮ ಮನೆಯಲ್ಲಿ ಕುಟುಂಬದೊಡನೆ ನೆಮ್ಮದಿಯ ಜೀವನವನ್ನು ನಡೆಸುತ್ತ ಪ್ರಪಂಚದಾದ್ಯಂತ ತಮ್ಮ ಸಹಾಯವನ್ನು ಅರಸಿ ತಮ್ಮ ಸಂದೇಹಗಳನ್ನು , ಪ್ರಶ್ನೆಗಳನ್ನು ಕೇಳುವ ವೈದ್ಯರಿಗೆ, ವಿಜ್ಞಾನಿಗಳಿಗೆ ಉತ್ತರಿಸುತ್ತಾ , ಅವರಿಗೆ ಮಾರ್ಗದರ್ಶನ ನೀಡುತ್ತಾ ಲಕ್ಷಾಂತರ ಹೋಮಿಯೋಪತಿ ವೈದ್ಯರ ಜೀವನಕ್ಕೆ ಒಂದು ಅರ್ಥ ಮತ್ತು ಶ್ರೇಷ್ಠ ಉದ್ದೇಶವನ್ನು ನೀಡಿ ಆಶಿರ್ವಾದಿಸುತ್ತಿದ್ದಾರೆ.


ಪ್ರೊ.ವಿಥಾಲ್ಕಸ್ ರವರ ಜೀವನವನ್ನು ವಿಶ್ಲೇಷಿಸುವ ಯೋಗ್ಯತೆ ಮತ್ತು ಅರ್ಹತೆ ಎರಡೂ ನನಗಿಲ್ಲ ಎಂದು ಭಾವಿಸುತ್ತೇನೆ. ಆದರೆ ಮಾನವ ಕುಲದ ಒಳಿತಿಗಾಗಿ ಕನಸನ್ನು ಕಟ್ಟಿ, ಆ ಕನಸ್ಸಿಗೆ ನೀರೆರೆದು ತಮ್ಮ ಪ್ರೀತಿ ಹಾಗು ಜ್ಞಾನದ ಮೂಲಕ ಕೋಟ್ಯಂತರ ಜೀವಗಳಿಗೆ ಆಸರೆಯಾಗಿ , ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ದಾರಿ ತೋರುವ ಮಹಾಗುರುಗಳ ಪರಿಚಯವನ್ನು ನನ್ನ ಓದುಗರಿಗೆ ಮಾಡಿಕೊಡುವ ಉತ್ಸಾಹ ನನ್ನನ್ನು ಈ ಲೇಖನ ಬರೆಯಲು ಪ್ರೇರೇಪಿಸಿದೆ.


ಪ್ರೊ. ಜಾರ್ಜ್ ವಿಥಾಲ್ಕಸ್ ರವರು ಇಂದು ತಮ್ಮ ತೊಂಭತ್ತೊಂದನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ . ತಮ್ಮ ಜೀವನದ ಹಿಂದಿನ ಅರವತ್ತು ವರ್ಷಗಳನ್ನು ಹೋಮಿಯೋಪತಿ ಪದ್ಧತಿಗೆ ಮುಡಿಪಿಟ್ಟು ತಮ್ಮ ಪ್ರೀತಿಯಿಂದ ಇಂದಿಗೂ ನನ್ನಂತಹ ವಿದ್ಯಾರ್ಥಿಗಳ ಜೀವನಕ್ಕೆ ಅರ್ಥವನ್ನು ನೀಡಿ ಮಾರ್ಗದರ್ಶಿಸುತ್ತಿರುವ ಮಹಾಗುರುಗಳಿಗೆ ಇದು ನನ್ನ ನುಡಿನಮನ.


7 views0 comments

Comments


bottom of page