top of page

“ಮದ್ರಾಸ್ ಐ” ಮಾರಕವಾಗದಿರಲಿ


ಈ ವರ್ಷ ಮುಂಗಾರು ಸ್ವಲ್ಪ ತಡವಾಗಿಯೇ ಬಂದಿದೆ. ಬಿಸಿಲ ಬೇಗೆಯಿಂದ ಬೆಂದಿದ್ದ ಜನ ಕಾದರೂ ಜೂನ್ ತಿಂಗಳಲ್ಲಿ ಬಾರದ ಮಳೆ ಜುಲೈ ತಿಂಗಳ ಕೊನೆಕೊನೆಗೆ ಶುರುವಾಗಿ ಇನ್ನೇನು ಆಗಸ್ಟ್ ತಿಂಗಳಲ್ಲಿ ಚೆನ್ನಾಗಿ ಸುರಿಯಬಹುದೆಂಬ ವರದಿಗಳು ಇವೆ.

ಮಳೆಯೇ ಹಾಗೆ. ಇಡೀ ಭೂಮಿ ತಂಪಾಗಲು ಇರೋ ಏಕೈಕ ಸಾಧನ. ರೈತರಂತೂ ತಮ್ಮ ಜೀವನ ನಡೆಸಲು ಮಳೆಯ ಮೇಲೆ ಅವಲಂಭಿತರು. ಮಕ್ಕಳಿಗೆ ಮಳೆಯಲ್ಲಿ ಆಡೋದು ಹಿಗ್ಗು. ಬಿಸಿಲಲ್ಲಿ ಬೆಂದು ನರಳಿದ ಹಿರಿಯರ ತನು ಮನಗಳಿಗೆ ಮಳೆ ತಂಪನ್ನೆರೆಯುವ ಮಳೆ , ಬಳಲಿ ಒಣಗಿರೋ ಭೂಮಿಗೆ ಜೀವದ ಸೆಲೆಯಾಗಿದೆ .

ಮಳೆ ಕೇವಲ ನೀರು ಸುರಿಯುವ ಪ್ರಕ್ರಿಯೆಯಲ್ಲದೆ , ಎಲ್ಲರಿಗೂ ಜೀವನಾಧಾರವಾಗಿದೆ . ಮಳೆ ಎಲ್ಲರ ಜೀವನದಲ್ಲೂ ಶಾಂತಿ, ನೆಮ್ಮದಿಯನ್ನು ತರುತ್ತದೆ. ಅದರ ಜೊತೆ ಮಳೆ ನಕಾರಾತ್ಮಕ ವಿಷಯವನ್ನು ಸಹ ತರುತ್ತದೆ. ಮಳೆಯ ಜೊತೆ ಸುರಿಯುವ ಕಾಯಿಲೆಗಳು.


ಪ್ರತೀ ವರ್ಷ ಸಮಯಕ್ಕೆ ಸರಿಯಾಗಿ ಮಾನ್ಸೂನ್ ಬಂದರೆ ಅದರ ಜೊತೆಗೆ ಸಾಮಾನ್ಯ ನೆಗಡಿ, ಕೆಮ್ಮಿನಂತಹ ಅಡಚಣೆಗಳು ಆಗುವುದು ಸಹಜ. ಅಂತ ನೆಗಡಿಗಳು ಮೂರ್ನಾಲ್ಕು ದಿನಗಳಲ್ಲಿ ತಮ್ಮ ಪಾಡಿಗೆ ತಾವೇ ಹೊರಟುಹೋಗುತ್ತವೆ . ಆದರೆ ಮುಂಗಾರು ತಡವಾದರೆ ಅದು ತನ್ನ ಜೊತೆಗೆ ವಿಶಿಷ್ಟ ಕಾಯಿಲೆಗಳನ್ನು ಹೊತ್ತುಕೊಂಡು ಬರುತ್ತದೆ. ಮುಂಗಾರು ತಡವಾಗುವುದರಿಂದ ಗಾಳಿಯಲ್ಲಿನ ಆರ್ದ್ರತೆ ಮತ್ತು ತೇವಾಂಶ ಹೆಚ್ಚಾಗುತ್ತದೆ. ಇದು ಕ್ರಿಮಿ ಕೀಟ ಬ್ಯಾಕ್ಟೀರಿಯಾ ಗಳು ಬೆಳೆಯಲು ಸೂಕ್ತವಾದ ವಾತಾವರಣವನ್ನುಂಟು ಮಾಡುತ್ತದೆ.


ಈ ಕಾರಣದಿಂದಲೇ, ಮುಂಗಾರು ತಡವಾಗುವ ವರ್ಷಗಳಲ್ಲಿ ನಾವು ವಾಡಿಕೆಗಿಂತ ಜಾಸ್ತಿ ಕಾಯಿಲೆಗಳನ್ನೇ ಕಾಣುತ್ತೇವೆ .

ಈ ವರ್ಷ ಕಳೆದ ಹದಿನೈದು ದಿನಗಳಿಂದ ಕಾಣಿಸಿಕೊಂಡಿರೋ ಅಂಥದ್ದೊಂದು ಕಾಯಿಲೆ ಎಂದರೆ ‘ಮದ್ರಾಸ್ ಐ’ (Conjunctivitis ). ಇದಕ್ಕೆ ‘ಕಣ್ಣು ಆಗೋದು’ ಎಂದು ಆಡುಭಾಷೆಯಲ್ಲಿ ಕರೆಯುತ್ತಾರೆ. ಈ ಸೋಂಕು ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ವೈರಸ್ ಗಳಿಂದ ಹರಡುತ್ತದೆ.

ನಮ್ಮ ಕಣ್ಣ ಗುಡ್ಡೆಗಳ ಮೇಲೆ ಒಂದು ತೆಳುವಾದ ಪದರ ಇರುತ್ತದೆ. ಅದು ಕಣ್ಣನ್ನು ರಕ್ಷಿಸಲು, ಕ್ರಿಮಿಗಳ ವಿರುದ್ಧ ಹೋರಾಡಲು ಕಣ್ಣಿಗೆ ಸಹಾಯ ಮಾಡುತ್ತದೆ . ಅದಕ್ಕೆ ಕಾಂಜುಂಕ್ಟಿವಾ (conjunctiva) ಎಂದು ಕರೆಯುತ್ತಾರೆ. ಅದಕ್ಕೆ ಸೋಂಕು ತಗುಲೋದರಿಂದಲೇ ಈ ಕಾಯಿಲೆ ಬರುತ್ತದೆ.


ಕಾಯಿಲೆಯ ಗುಣಲಕ್ಷಣಗಳು ಯಾರಿಗೂ ಗೊತ್ತಿರದೆ ಏನಿಲ್ಲ, ಮೊದಲು ಕಣ್ಣುಗಳು ಕೆಂಪಗಾಗಲು ಶುರುವಾಗುತ್ತವೆ. ನೋಡಿದವರು ನಿಮ್ಮ ಕಣ್ಣುಗಳ ಬಿಳಿ, ಕೆಂಪು ಬಣ್ಣಕ್ಕೆ ತಿರುಗಿರೋದನ್ನು ಗಮನಿಸುತ್ತಾರೆ. ಇದು ಸೋಂಕಿನ ಮೊದಲೆರಡು ದಿನ ಕಾಣಿಸಿಕೊಳ್ಳುತ್ತದೆ. ನಂತರ ಕಣ್ಣುಗಳ ನೆವೆ ಶುರುವಾಗುತ್ತದೆ, ಕಣ್ಣುಗಳಲ್ಲಿ ಕಿರಿಕಿರಿ, ಕಡಿಯುವುದು, ಕಣ್ಣಲ್ಲಿ ಏನೋ ಬಿದ್ದರೋ ಹಾಗೆ ಅನ್ನಿಸುವುದು , ಹೀಗೆಲ್ಲ ಲಕ್ಷಣಗಳು ಪ್ರಾರಂಭವಾಗಿ ಪದೇ ಪದೇ ನಾವು ಕಣ್ಣುಗಳನ್ನು ಮುಟ್ಟಿಕೊಳ್ಳೋದು, ಕೆರೆದುಕೊಳ್ಳೋದು ಮಾಡೋಹಾಗೆ ಮಾಡುತ್ತವೆ. ಇದಾದ ಎರಡು ದಿನಗಳ ಹೊತ್ತಿಗೆ ಕಣ್ಣುಗಳಿಂದ ಹಳದಿ ಅಥವಾ ಬಿಳಿ ಸ್ರಾವ (ಪೀಚು) ಪ್ರಾರಂಭವಾಗುತ್ತದೆ . ಬೆಳಗ್ಗೆ ಎದ್ದಾಗ ಕಣ್ಣ ರೆಪ್ಪೆಗಳು ಒಂದಕ್ಕೊಂದು ಅಂಟಿಕೊಂಡಿರುತ್ತವೆ . ಈ ಸೋಂಕು ಸುಮಾರು ಏಳರಿಂದ ಹತ್ತು ದಿನ ಇದ್ದು ಹೋಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಸೋಂಕು ಜಾಸ್ತಿಯಾದಾಗ , ಅದು ಕಣ್ಣಿನ ಒಳಪದರಗಳಿಗೂ ಹರಡಿ ಕೊಂಚ ರಕ್ತಸ್ರಾವವಾಗುವುದೂ ಉಂಟು.


ಅಷ್ಟೇನೂ ಅಪಾಯಕಾರಿಯಲ್ಲದ ಈ ಸೋಂಕು ಯಾವ ಚಿಕಿತ್ಸೆ ಇಲ್ಲದಿದ್ದರೂ ಬಹುಪಾಲು ಜನರಲ್ಲಿ ಏಳರಿಂದ ಎಂಟು ದಿನದಲ್ಲಿ ತನ್ನ ಪಾಡಿಗೆ ತಾನೇ ವಾಸಿಯಾಗುತ್ತದೆ. ಆದರೆ ಮಕ್ಕಳಲ್ಲಿ, ಸಕ್ಕರೆ ಕಾಯಿಲೆ, ಅತೀ ರಕ್ತದೊತ್ತಡ ಇರುವವರಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದೇ ಒಳ್ಳೆಯದು . ವೈದ್ಯಕೀಯ ಪ್ರಪಂಚ ಇಷ್ಟು ಮುಂದುವರೆದಿರುವಾಗ ಸೋಂಕುಗಳನ್ನು ಬೆಳೆಯುವ ಮೊಳಕೆಯಲ್ಲೇ ಚಿವುಟಿ ಹಾಕುವುದು ಸೂಕ್ತ .


ಸಾಮಾನ್ಯವಾಗಿ ಕಣ್ಣಿಂದ ಸ್ರಾವವಾಗುವ ದ್ರವದಲ್ಲೇ ವೈರಾಣುವಿನ ಸಾಂದ್ರತೆ ಹೆಚ್ಚಾಗಿರುತ್ತದೆ. ಅದು ಇನ್ನೊಬ್ಬರ ಸಂಪರ್ಕಕ್ಕೆ ಬಂದಂತೆ ಸೋಂಕು ಹರಡುತ್ತಾ ಹೋಗುತ್ತದೆ . ಈ ಸೋಂಕು ಹೊಂದಿರುವ ವ್ಯಕ್ತಿ ಕಡಿತ, ಉರಿ ಎಂದು ತನ್ನ ಕಣ್ಣನ್ನು ಮುಟ್ಟಿಕೊಂಡಾಗ ಆ ವೈರಾಣುಗಳು ಅವನ ಕೈ ಚರ್ಮದ ಮೇಲೆ ಹರಡುತ್ತವೆ . ಅದೇ ಕೈಯಿಂದ ಆ ವ್ಯಕ್ತಿ ಮನೆಯಲ್ಲಿರೋ ವಸ್ತುಗಳು, ಟವೆಲ್ ಗಳನ್ನು ಮುಟ್ಟುತ್ತಾನೆ . ಮನೆಯ ಮತ್ತೊಬ್ಬ ಸದಸ್ಯರು ಆ ವಸ್ತುಗಳನ್ನು ಮುಟ್ಟಿದಾಗ , ಟವೆಲ್ ಗಳನ್ನ ಬಳಸಿದಾಗ ಆ ವೈರಾಣುಗಳು ಅವರ ಕೈಗಳಿಗೆ ಹರಡುತ್ತವೆ . ಆ ವ್ಯಕ್ತಿ ಯಾವುದಾದರೂ ಕಾರಣಕ್ಕೆ ತನ್ನ ಮುಖವನ್ನು , ಕಣ್ಣುಗಳನ್ನು , ತೊಳೆಯದ ಕೈಗಳಿಂದ ಮುಟ್ಟುತ್ತಿದ್ದ ಹಾಗೆಯೇ ಆ ಸೋಂಕು ಅವರ ಕಣ್ಣುಗಳಿಗೆ ಹರಡುತ್ತದೆ . ಹೀಗಾಗಿ ಈ ವೈರಾಣುವನ್ನು ತಡೆಗಟ್ಟುವುದು ಕಷ್ಟಸಾಧ್ಯವಾದ ಕೆಲಸವೇ ಸರಿ . ಆದರೂ ನಾವು ನಮ್ಮ ಜಾಗ್ರತೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಂಡರೆ ಈ ಸೋಂಕಿನ ತೀವ್ರತೆಯನ್ನು ತಡೆಗಟ್ಟಬಹುದು.


ಸೋಂಕಿತನ ಕಣ್ಣುಗಳು ಕೆಂಪು ಬಣ್ಣಕ್ಕೆತಿರುಗುತ್ತವಾದ್ದರಿಂದ ಅವರ ಕಣ್ಣುಗಳನ್ನು ನೋಡಿದೊಡನೆಯೇ ಇನ್ನೊಬ್ಬರಿಗೆ ಸೋಂಕು ಹರಡುತ್ತದೆ ಎನ್ನುವ ನಂಬಿಕೆ ಇದೆ ಆದರೆ ಅದಕ್ಕೆ ಯಾವ ವೈಜ್ಞಾನಿಕ ಪುರಾವೆಗಳಿಲ್ಲ . ಆದ್ದರಿಂದ ಸೋಂಕಿತರು ಕಪ್ಪು ಕನ್ನಡಕವನ್ನು ಧರಿಸಲೇ ಬೇಕು ಅನ್ನೋ ಯಾವ ಅನಿವಾರ್ಯತೆಯೂ ಇಲ್ಲ . ಕನ್ನಡಕಗಳನ್ನು ಧರಿಸುವುದರಿಂದ ಸೋಂಕಿತ ತನ್ನ ಕಣ್ಣುಗಳನ್ನು ಪದೇ ಪದೇ ಮುಟ್ಟಿಕೊಳ್ಳೋದು ತಪ್ಪಾಗುತ್ತದೆ ಎಂದಾದರೆ ಧರಿಸಬಹುದು. ಅದನ್ನು ಹೊರತುಪಡಿಸಿ ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ಈ ಸೋಂಕನ್ನು ಸುಲಭವಾಗಿ ತಡೆಯಬಹುದು. ಹೊರಗಡೆ ಓಡಾಡಿ ಬಂಡ ತಕ್ಷಣ ಕೈಗಳನ್ನು ಸೋಪು ಹಚ್ಚಿ ಚೆನ್ನಾಗಿ ತೊಳೆಯಬೇಕು . ಮೂಡು ದಿನಕ್ಕೆ ಒಮ್ಮೆಯಾದರೂ ಮನೆಯ ಟವೆಲ್ ಗಳನ್ನು ತೊಳೆಯುವುದು ಒಳಿತು . ಹಾಗೆಯೇ ಸೋಂಕಿತ ವ್ಯಕ್ತಿಯನ್ನು ಒಂದು ವಾರದ ಕಾಲವಾದರು ಮನೆಯ ಇತರೆ ಸದಸ್ಯರಿಂದ ನೇರವಾದ ಸಂಪರ್ಕದಿಂದ ದೂರ ಇಡಬಹುದು . ಅವರಿಗೆ ಪ್ರತ್ಯೇಕ ಟವೆಲ್, ಕರವಸ್ತ್ರಗಳನ್ನು ಕೊಡಬೇಕು. ಸೋಂಕು ಮುಗಿಯುವವರೆಗೂ ಬೇರೆಯವರನ್ನು ಮುಟ್ಟದಂತೆ ,ಬೆಳಗ್ಗೆ ಎದ್ದತಕ್ಷಣ ಮತ್ತು ದಿನದಲ್ಲಿ ಅವಾಗವಾಗ ಕಣ್ಣುಗಳನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯುವ ಸೂಚನೆ ನೀಡಬೇಕು . ವೈದ್ಯರ ಬಳಿ ತೋರಿಸಿ ಕಣ್ಣನ್ನು ಪರೀಕ್ಷಿಸಿ ಅವರು ಬರೆದುಕೊಡುವ ಕಣ್ಣಿನ ಔಷದಗಳನ್ನು ಬಳಸಬೇಕು .


ಹೋಮಿಯೋಪತಿ ಮತ್ತು ಕಣ್ಣಿನ ಚಿಕಿತ್ಸೆ


ಮದ್ರಾಸ್ ಕಣ್ಣಿನಂತಹ ಸೋಂಕುಗಳಿಗೆ ಹೋಮಿಯೋಪತಿ ಯಲ್ಲಿ ಸಮರ್ಪಕವಾದ ಚಿಕಿತ್ಸೆ ಇದೆ . ಸೋಂಕು ಅಷ್ಟು ವ್ಯಾಪ್ತವಾಗಿ ಪರಿಸರದೆಲ್ಲೆಡೆ ಹರಡಿದ್ದರೂ ಪ್ರತಿಯೊಬ್ಬರೂ ಆ ಸೋಂಕಿನಿಂದ ನರಳೋದಿಲ್ಲ. ಕೆಲವರಿಗಂತೂ ಮನೆಯಲ್ಲಿ ಸೋಂಕಿತ ವ್ಯಕ್ತಿ ಇದ್ದರೂ ಸೋಂಕು ತಗುಲೋದಿಲ್ಲ. ಅದಕ್ಕೆ ಕಾರಣ , ನಮ್ಮ ರೋಗ ನಿರೋಧಕ ಶಕ್ತಿ ನಮ್ಮ ನಮ್ಮ ವೈಯಕ್ತಿಕತೆಗೆ ತಕ್ಕಂತೆ ರೂಪುಗೊಂಡಿರುತ್ತೆ. ಕೆಲವರಿಗೆ ರೋಗ ನಿರೋಧಕ ಶಕ್ತಿ ನೀಕ್ಷ್ಣವಾಗಿದ್ದರೆ ಕೆಲವರಲ್ಲಿ ಅದು ಮಂದವಾಗಿರುತ್ತೆ . ದುರ್ಬಲವಾದ ರೋಗ ನಿರೋಧಕ ಶಕ್ತಿ ಉಳ್ಳವರಿಗೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೋಮಿಯೋಪತಿ ಪದ್ಧತಿಯಲ್ಲಿ ಈ ವೈಯಕ್ತಿಕತೆಯನ್ನು ಪರಿಗಣಿಸಿ ವ್ಯಕ್ತಿಯ ರೋಗ ನಿರೋಧಕ ಶಕ್ತಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಮರ್ಪಕವಾದ ಹೋಮಿಯೋಪತಿ ಚಿಕಿತ್ಸೆ ಸಿಕ್ಕಲ್ಲಿ ವ್ಯಕ್ತಿ ಎರಡರಿಂದ ಮೂರು ದಿನಗಳಲ್ಲಿಯೇ ಈ ಸೋಂಕಿನಿಂದ ಮುಕ್ತನಾಗುತ್ತಾನೆ.


ಒಟ್ಟಾರೆ ‘ಮದ್ರಾಸ್ ಕಣ್ಣು’ ಸೋಂಕಿಗೆ ಭಯಪಡದೆ, ಸರಿಯಾದ ಮುಂಜಾಗ್ರತೆಗಳನ್ನು ತಗೆದುಕೊಂಡು , ಸಮರ್ಪಕವಾದ ಚಿಕಿತ್ಸೆ ಪಡೆದುಕೊಂಡಲ್ಲಿ ಈ ಸೋಂಕಿನಿಂದ ಮುಕ್ತವಾಗಿ , ಮಳೆಗಾಲವನ್ನು ಸಂಪೂರ್ಣವಾಗಿ ಆನಂದಿಸಬಹುದು . ಇಂದೇ ಜಾಗೃತಗೊಳ್ಳಿ , ನಾಳೆ ಸುಖವಾಗಿರಿ.


10 views0 comments

Comments


bottom of page